ಮಂಗಳೂರು, ಮಾ 23(DaijiworldNews/MS): ಪ್ರಜಾಪ್ರಭುತ್ವದ ಹಬ್ಬವಾದ ಚುನಾವಣೆಗಳಲ್ಲಿ ಅರ್ಹ ಮತದಾರರೆಲ್ಲರೂ ತಮ್ಮ ಹಕ್ಕು ಚಲಾಯಿಸಲು ಅನುಕೂಲವಾಗುವಂತೆ ಪ್ರತಿಬಾರಿ ವಿವಿಧ ರೀತಿಯ ಸೌಕರ್ಯ ಕಲ್ಪಿಸಿಕೊಡುವ ಚುನಾವಣಾ ಆಯೋಗವು ಈ ಬಾರಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ಶೇ.40ಕ್ಕೂ ಹೆಚ್ಚು ಅಂಗವಿಕಲತೆ ಹೊಂದಿರುವ ವಿಕಲಚೇತನರಿಗೆ ಅಂಚೆ ಮತದ ಮೂಲಕ ಮನೆಯಿಂದಲೇ ಮತ ಚಲಾಯಿಸುವ ಅವಕಾಶ ಕಲ್ಪಿಸಿಕೊಟ್ಟಿದೆ.
ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಈಗಾಗಲೇ ಮತದಾರರ ಪಟ್ಟಿಯಲ್ಲಿ ಗುರುತಿಸಲಾದ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕ ಮತದಾರರು ಹಾಗೂ ಶೇ.40ಕ್ಕೂ ಹೆಚ್ಚು ವಿಕಲತೆ ಹೊಂದಿರುವ ಬಗ್ಗೆ ಸಕ್ಷಮ ಪ್ರಾಧಿಕಾರದಿಂದ ನೀಡಲಾದ ಪ್ರಮಾಣ ಪತ್ರ ಹೊಂದಿರುವ ವಿಕಲಚೇತನ ಮತದಾರರ ಮನೆಗಳಿಗೆ ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್ಓ) ಭೇಟಿ ನೀಡಿ ಅವರ ಮನೆಯಲ್ಲಿಯೇ ಮತದಾನ ಮಾಡಲು ಅಗತ್ಯವಿರುವ ಅಂಚೆ ಮತದಾನದ ಸೌಲಭ್ಯ ನೀಡುವ 12-ಡಿ ನಮೂನೆ ನೀಡುವರು. ಅದನ್ನು ಪಡೆದು, ಭರ್ತಿ ಮಾಡಿ ಬೂತ್ ಮಟ್ಟದ ಅಧಿಕಾರಿಗಳಿಗೆ ಸಲ್ಲಿಸಬೇಕು. ಈ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಿದ ಮತದಾರರ ಮನೆಗೆ ಬಿಎಲ್ಓಗಳು ಮೊದಲ ಸಲ ಭೇಟಿ ನೀಡಿದ ಸಂದರ್ಭದಲ್ಲಿ ಮತದಾರರು ಲಭ್ಯವಿಲ್ಲದಿದ್ದಲ್ಲಿ ಪುನಃ ಎರಡನೇ ಬಾರಿ ಭೇಟಿ ನೀಡುವರು, ಈ ಮೂಲಕ ಅವರಿಗೆ ಮತದಾನದ ಸೌಲಭ್ಯ ಒದಗಿಸಲಾಗುವುದು. ಆದರೆ ಎರಡೂ ಬಾರಿಯ ಭೇಟಿ ಸಂದರ್ಭದಲ್ಲಿ ಮತದಾರರು ಲಭ್ಯವಾಗದಿದ್ದರೆ ಅಂತಹ ಮತದಾರರು ಮತದಾನದ ಸೌಲಭ್ಯ ಕಳೆದುಕೊಳ್ಳುವರು. ಅಂಚೆ ಮತದಾನ ಮಾಡಲಿಚ್ಚಿಸುವವರು ಬಿಎಲ್ಒಗಳಿಗೆ 12-ಡಿ ದೃಢೀಕರಣ ಪತ್ರವನ್ನು ಸಲ್ಲಿಸಬೇಕು.
ಮತಗಟ್ಟೆಯಲ್ಲಿ ಇವಿಎಂ ಯಂತ್ರದ ಮೂಲಕ ಮತದಾನ ನಡೆದರೆ, ಮನೆಮನೆ ಭೇಟಿಯ ಅಂಚೆ ಮತದಾನವು ಮತಗಟ್ಟೆಯಲ್ಲಿ ನಡೆಯುವ ಮತದಾನ ಪ್ರಕ್ರಿಯೆಯಂತೆ ಸಂಪೂರ್ಣ ಮನೆಯಲ್ಲೇ ನಡೆಯಲಿದ್ದು, ಅಂಚೆ ಮತಪತ್ರದ ಮೂಲಕ ನಡೆಯುತ್ತದೆ. ಇದಕ್ಕಾಗಿ 12-ಡಿ ನಮೂನೆಯಲ್ಲಿ ಅರ್ಜಿ ಸಲ್ಲಿಸಿದ ಮತದಾರರಿಗೆ ಅವರ ಮನೆಯಲ್ಲಿಯೇ ಚುನಾವಣಾ ಪ್ರಕ್ರಿಯೆಯನ್ನು ನಿಗಧಿಪಡಿಸಿದ ಚುನಾವಣೆಯ ದಿನಾಂಕದ ಮುನ್ನವೇ ನಡೆಯಲಿದೆ.
ಚುನಾವಣಾ ಆಯೋಗವು 85 ವರ್ಷ ಮೇಲ್ಪಟ್ಟ ನಾಗರೀಕರು ಹಾಗೂ ವಿಕಲಚೇತನ (40%ಕ್ಕೂ ಹೆಚ್ಚು ವಿಕಲತೆ) ಮತದಾರರಿಗೆ ಮನೆಯಲ್ಲಿಯೇ ಅಂಚೆ ಮತದಾನ ಮಾಡುವ ಸೌಲಭ್ಯ ನೀಡಿದೆ, ಆದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗಳಿಗೆ ತೆರಳಿ ಮತದಾನ ಮಾಡುವ ಮೂಲಕ ಚುನಾವಣಾ ಹಬ್ಬದಲ್ಲಿ ಭಾಗವಹಿಸಬಹುದು.
ಅದಕ್ಕಾಗಿ ಹಿರಿಯ ನಾಗರೀಕರು ಹಾಗೂ ವಿಕಲಚೇತನ ಮತದಾರರಿಗೆ ಮತಗಟ್ಟೆಯಲ್ಲಿಯೇ ಬಂದು ಮತ ಚಲಾಯಿಸಲು ಅಗ್ಯವಿರುವ ವೀಲ್ ಚೇರ್, ರ್ಯಾಂಪ್, ಮತಗಟ್ಟೆ ಸಹಾಯಕರು ಸೇರಿದಂತೆ ಇತರೆ ಎಲ್ಲಾ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿರುತ್ತದೆ. ಒಂದು ಬಾರಿ ಮನೆಯಿಂದಲೇ ಮತ ಚಲಾಯಿಸುವ ಆಯ್ಕೆ ಮಾಡಿಕೊಂಡಲ್ಲಿ, ಅವರಿಗೆ ಮತಗಟ್ಟೆಗೆ ಬಂದು ಮತ ಚಲಾಯಿಸಲು ಅವಕಾಶವಿರುವುದಿಲ್ಲ ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.