ಮಂಗಳೂರು, ಮಾ 22(DaijiworldNews/ AK): ಮತದಾರರ ಪ್ರತಿ ಮತವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತನ್ನದೇ ದೊಡ್ಡ ಮೌಲ್ಯ ಹೊಂದಿದೆ. ಜವಾಬ್ಧಾರಿಯಿಂದ ಮತದಾನದ ಹಕ್ಕು ಚಲಾವಣೆ ಮಾಡಿದಾಗ ಮಾತ್ರ ದೇಶ ರಕ್ಷಣೆ ಸಾಧ್ಯ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಅವರು ಅಭಿಪ್ರಾಯಪಟ್ಟರು.
ಅವರು ಮಾ.22ರ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮಂಗಳೂರು ಮಹಾನಗರ ಪಾಲಿಕೆ ಹಾಗೂ ವಿಶ್ವವಿದ್ಯಾಲಯ ಕಾಲೇಜು ಆಶ್ರಯದಲ್ಲಿ ಇಲ್ಲಿನ ವಿಶ್ವವಿದ್ಯಾಲಯ ಕಾಲೇಜು ಆವರಣದಲ್ಲಿ ಸ್ವೀಪ್ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ಚುನಾವಣಾ ಪ್ರಜಾತಂತ್ರ ವ್ಯವಸ್ಥೆಯ ದೊಡ್ಡ ಹಬ್ಬ, ಈ ಹಬ್ಬವನ್ನು ಸಂಭ್ರಮದಿಂದ ಸ್ವಾಗತಿಸಬೇಕು. ಜಿಲ್ಲೆಯಲ್ಲಿ ಈ ಹಬ್ಬವನ್ನು ಅತ್ಯಂತ ವ್ಯವಸ್ಥಿತವಾಗಿ ನಡೆಸುವಲ್ಲಿ ಈ ಪ್ರಕ್ರಿಯೆಯಲ್ಲಿ ಸರ್ಕಾರಿ ಯಂತ್ರದ 18000 ಮಂದಿ ಅಧಿಕಾರಿ, ಸಿಬ್ಬಂದಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಮತದಾನ ದಿನದಂದು ಜಿಲ್ಲೆಯ 1,876 ಮತಗಟ್ಟೆಗಳಲ್ಲಿ ಪೊಲೀಸ್ ಸಿಬ್ಬಂದಿ ಹೊರತು ಪಡಿಸಿ 11,500 ಸಿಬ್ಬಂದಿ ಚುನಾವಣಾ ಪ್ರಕ್ರಿಯೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲಿದ್ದಾರೆ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ಅವರು ಮಾತನಾಡಿ, ಚುನಾವಣಾ ಆಯೋಗದ ನಿರ್ದೇಶನದಂತೆ ಮತಗಟ್ಟೆಗಳಲ್ಲಿ ಅಗತ್ಯ ಮೂಲಸೌಕರ್ಯಗಳಾದ ಕುಡಿಯುವ ನೀರು, ವಿಕಲಚೇತನರಿಗೆ ಗಾಲಿಕುರ್ಚಿ ವ್ಯವಸ್ಥೆ, ವಿದ್ಯುತ್, ಶೌಚಾಲಯ ಇತ್ಯಾದಿ ವ್ಯವಸ್ಥೆಗಳನ್ನು ಕಲ್ಪಿಸಲಾಗುತ್ತಿದೆ. ಚುನಾವಣೆಯ ಅಕ್ರಮಗಳಿಗೆ ಸಂಬಂಧಿಸಿ ದೂರುದಾರರು ಗೌಪ್ಯವಾಗಿ ಸಿವಿಜಿಲ್ ಮೂಲಕ ದೂರು ಸಲ್ಲಿಸಬಹುದು ಎಂದರು.
ಜಿಲ್ಲಾ ಚುನಾವಣಾ ರಾಯಭಾರಿ ಹಾಗೂ ಐಕಾನ್, ಹಾಸ್ಯನಟ, ಕಲಾವಿದ ಅರವಿಂದ ಬೋಳಾರ್ ಅವರು ಮಾತನಾಡಿ, ಕಾಲೇಜು ವಿದ್ಯಾರ್ಥಿಗಳು ತಮ್ಮ ಮನೆಯವರು, ನೆರೆಹೊರೆಯವರು ಮಾತ್ರವಲ್ಲದೆ ಹೊರ ರಾಷ್ಟ್ರಗಳಲ್ಲಿ ದುಡಿಯುತ್ತಿರುವ ಸಂಬಂಧಿಕರಿಗೆ ಮತದಾನ ಮಾಡಲು ಮರೆಯದಂತೆ ಜಾಗೃತಿ ಮೂಡಿಸಬೇಕು ಎಂದರು.
ಪಾಲಿಕೆ ಆಯುಕ್ತ ಆನಂದ್, ಖ್ಯಾತ ವ್ಯಂಗ್ಯಚಿತ್ರಕಾರ ಜಾನ್ ಚಂದ್ರನ್ ಇದ್ದರು. ಕಾಲೇಜಿನ ಪ್ರಾಧ್ಯಾಪಕಿ ಭಾರತಿ ಪಿಲಾರ್ ಕಾರ್ಯಕ್ರಮ ನಿರೂಪಿಸಿದರು. ತಸ್ನೀಮ್ ಸ್ವಾಗತಿಸಿದರು. ಕಾಲೇಜು ಪ್ರಾಂಶುಪಾಲೆ ಡಾ. ಅನುಸೂಯ ರೈ ವಂದಿಸಿದರು.
ಕಾರ್ಯಕ್ರಮ ಉದ್ಘಾಟನೆಗೂ ಮೊದಲು ಖ್ಯಾತ ವ್ಯಂಗ್ಯಚಿತ್ರ ಕಲಾವಿದ ಜಾನ್ ಚಂದ್ರನ್ ಅವರು ಮತದಾರರಲ್ಲಿ ಜಾಗೃತಿ ಮೂಡಿಸಲು ರಚಿಸಿದ ವ್ಯಂಗ್ಯಚಿತ್ರ ಪ್ರದರ್ಶನವನ್ನು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಉದ್ಘಾಟಿಸಿದರು.ಬಳಿಕ ವೇದಿಕೆಯಲ್ಲಿ ಗಿರೀಶ್ ನಾವಡ ಯಕ್ಷಗಾನ ತಂಡದಿಂದ ಮತದಾನ ಜಾಗೃತಿ ಮೂಡಿಸಲಾಯಿತು. ನಂತರ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ವಾಕಥಾನ್ ನಡೆಯಿತು.