ಮಂಗಳೂರು, ಮಾ 22(DaijiworldNews/MS): ಬಾಲ ಹಾಗೂ ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ, 1986ರನ್ವಯ ಮಕ್ಕಳ ಶಿಕ್ಷಣದ ಹಕ್ಕಿಗೆ ಮಾರಕವಾಗದಂತೆ ಬಾಲ ನಟ/ನಟಿಯಾಗಿ ನಟನಾ ಕೆಲಸ ನಿರ್ವಹಿಸುವ ಚಟುವಟಿಕೆಗಳನ್ನು ಹೊರತುಪಡಿಸಿ, ಕಾಯ್ದೆಯು ಎಲ್ಲಾ ಉದ್ಯೋಗ ಮತ್ತು ಪ್ರಕ್ರಿಯೆಗಳಲ್ಲಿ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಕೆಲಸಕ್ಕೆ ನಿಯೋಜಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
15 ರಿಂದ 18 ವರ್ಷದೊಳಗಿನ ಕಿಶೋರ ಕಾರ್ಮಿಕರನ್ನು ಅಪಾಯಕಾರಿಯಲ್ಲದ ಉದ್ದಿಮೆಗಳಲ್ಲಿ ದುಡಿಸಿಕೊಳ್ಳುವುದನ್ನು ನಿಯಂತ್ರಿಸಲಾಗಿದೆ. ಮಕ್ಕಳನ್ನು ಕೆಲಸಕ್ಕೆ ನಿಯೋಜಿಸಿಕೊಂಡಲ್ಲಿ ಮೊದಲ ಅಪರಾಧಕ್ಕೆ ತಪ್ಪಿತಸ್ಥ ಮಾಲೀಕರಿಗೆ 6 ತಿಂಗಳಿನಿಂದ 2 ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ 20,000 ರೂ. ನಿಂದ 50,000 ರೂ. ವರೆಗೆ ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶವಿರುತ್ತದೆ.
ಪುನರಾವರ್ತಿತ ಅಪರಾಧಕ್ಕೆ 1 ವರ್ಷದಿಂದ 3 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶವಿರುತ್ತದೆ. ಬಾಲ ಹಾಗೂ ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ, 1986ರ ಕರ್ನಾಟಕ ನಿಯಮಗಳು “2ಸಿ” ರಲ್ಲಿ ಒಬ್ಬ ಕಲಾವಿದನಾಗಿ ಕೆಲಸ ಮಾಡಬೇಕಾದ ಮಗು ನಿಬಂಧನೆಗಳನ್ವಯ ಪರಿಸ್ಥಿತಿಗಳಿಗೆ/ನಿಯಮಗಳಿಗೆ ಒಳಪಟ್ಟಂತೆ ಮಗು ಕಲಾವಿದನಾಗಿ ಕೆಲಸ ಮಾಡಲು ವಿವಿಧ ಅಂಶಗಳನ್ನು ಪಾಲಿಸಬೇಕು.
ಯಾವುದೇ ಮಗುವನ್ನು ಒಂದು ದಿನದಲ್ಲಿ 5 ಗಂಟೆಗಳಿಗಿಂತ ಹೆಚ್ಚಿನ ಅವಧಿಗೆ ನಟನಾ ಕೆಲಸಕ್ಕೆ ನಿಯೋಜಿಸುವಂತಿಲ್ಲ ಮತ್ತು ವಿಶ್ರಾಂತಿ ಇಲ್ಲದೆ 3 ಗಂಟೆಗಳಿಗಿಂತ ಹೆಚ್ಚು ಕೆಲಸ ಮಾಡಿಸುವಂತಿಲ್ಲ.ಶ್ರವಣ ಮತ್ತು ದೃಶ್ಯ ಮಾಧ್ಯಮದ ಯಾವುದೇ ನಿರ್ಮಾಪಕರು ನಿರ್ಮಿಸಿದ ಅಥವಾ ಯಾವುದೇ ವಾಣಿಜ್ಯ ಪರ ಕಾರ್ಯಕ್ರಮದಲ್ಲಿ ಮಗು ಭಾಗವಿಸುವುದಿದ್ದರೆ ಆ ಚಟುವಟಿಕೆ ನಡೆಯುವ ಪ್ರದೇಶದ ಜಿಲ್ಲಾದಂಡಾಧಿಕಾರಿಗಳ ಪೂರ್ವಾನುಮತಿ ಪಡೆದು ಭಾಗವಹಿಸುವಂತೆ ಮಾಡುವುದು ಮತ್ತು ಈ ಚಟುವಟಿಕೆ ಪ್ರಾರಂಬಿಸುವ ಪೂರ್ವದಲ್ಲಿ ನಮೂನೆ “ಸಿ” ಯಲ್ಲಿ ಜಿಲ್ಲಾ ದಂಡಾಧಿಕಾರಿಗೆ ಮುಚ್ಚಳಿಕೆ ಪತ್ರ ಸಲ್ಲಿಸುವುದು ಮತ್ತು ಭಾಗವಹಿಸುವ ಮಕ್ಕಳ ಪಟ್ಟಿ ಪೋಷಕರ ಅಥವಾ ಪಾಲಕರ ಒಪ್ಪಿಗೆ ಪತ್ರ ಸಲ್ಲಿಸುವುದು.
ಮಗುವಿನ ಸಂರಕ್ಷತೆಗೆ ಸಂಬಂಧಿಸಿದಂತೆ, ನಿರ್ಮಾಪಕರ ಅಥವಾ ಸಮಾರಂಭದ ಆಯೋಜಕರ ಹೆಸರು ಒದಗಿಸುವುದು. ಮಕ್ಕಳನ್ನು ಬಳಸಿ ಸಂಪೂರ್ಣ ಚಿತ್ರೀಕರಣ ಮಾಡುವ ಸಂದರ್ಭದಲ್ಲಿ ಮಕ್ಕಳ ದುರುಪಯೋಗ ಪ್ರಕರಣ, ನಿರ್ಲಕ್ಷ್ಯ ಅಥವಾ ಶೋಷಣೆ ನಡೆಯದಂತೆ ಸೂಕ್ತ ಮುಂಜಾಗ್ರತ ಕ್ರಮಗಳನ್ನು ಕೈಗೊಂಡಿರಬೇಕೆಂದು ಚಲನಚಿತ್ರಗಳ ಅಥವಾ ದೂರದರ್ಶನದ ಪ್ರದರ್ಶನದ ಹಕ್ಕು ನಿರಾಕರಣೆಗೆ ಒಳಪಟ್ಟಿದೆ ಎಂಬುದನ್ನು ನಿರ್ಮಾಪಕರಿಗೆ ಖಚಿತ ಪಡಿಸುವುದು.
ಮುಚ್ಚಳಿಕೆಯು 6 ತಿಂಗಳುವರೆಗೆ ಮಾನ್ಯವಾಗಿರುತ್ತದೆ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ನಿಬಂಧನೆಗಳನ್ನು ಸುರಕ್ಷತೆ ಮತ್ತು ಮಕ್ಕಳ ದುರುಪಯೋಗ ತಡೆ ಕುರಿತಾದ ಮಾನ್ಯತೆ ಪಡೆದ ಮಾರ್ಗಸೂಚಿಗಳು ಮತ್ತು ಇಂತಹ ಉದ್ದೇಶಗಳಿಗಾಗಿ ಸೂಕ್ತ ಸರ್ಕಾರವು ನಿಗಧಿತವಾಗಿ ಹೊರಡಿಸಿರುವ ಈ ಕೆಳಕಂಡ ಸುರಕ್ಷತಾ ನೀತಿಗಳನ್ನು ಅಳವಡಿಸಿಕೊಂಡಿರುವ ಬಗ್ಗೆ ಸ್ಪಷ್ಟವಾಗಿ ತಿಳಿಸುವುದು.
ಮಗುವಿನ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸಲು ಖಾತ್ರಿಪಡಿಸುವುದು. ಮಗುವಿನ ಸಕಾಲಿಕ ಪೌಷ್ಠಿಕ ಆಹಾರ ಒದಗಿಸುವುದು. ದೈನಂದಿನ ಅಗತ್ಯಗಳಿಗೆ ಸಾಕಾಗುವಷ್ಟು ಸಾಮಾಗ್ರಿಗಳು, ಸ್ವಚ್ಚ ಮತ್ತು ಸುರಕ್ಷಿತವಾದ ಆಶ್ರಯ ಒದಗಿಸುವುದು. ಈ. ಶಿಕ್ಷಣದ ಹಕ್ಕು ಸಂರಕ್ಷಣೆ, ಲೈಂಗಿಕ ಅಪರಾಧಗಳಿಂದ ರಕ್ಷಣೆ ಒಳಗೊಂಡಂತೆ ಮಕ್ಕಳ ರಕ್ಷಣೆ ಕುರಿತಾಗಿ ಕಾಲ ಕಾಲಕ್ಕೆ ಜಾರಿಯಲ್ಲಿರುವ ಎಲ್ಲಾ ಕಾನೂನುಗಳ ಪಾಲನೆ ಮಾಡುವುದು.
ಮಗು ಶಾಲೆಯ ಪಾಠ ಪ್ರವಚನಗಳಿಗೆ ಗೈರಾಗದಂತೆ ಶಿಕ್ಷಣದಲ್ಲಿ ನಿರಂತರವಾಗಿ ಮುಂದುವರೆಯಲು ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಒದಗಿಸುವುದನ್ನು ಖಾತರಿಪಡಿಸುವುದು ಮತ್ತು ಯಾವುದೇ ಮಗುನಿರಂತರವಾಗಿ 27 ದಿನಗಳಿಗಿಂತ ಹೆಚ್ಚಿನ ದಿನಗಳು ನಟನಾ ಕೆಲಸದಲ್ಲಿ ತೊಡಗಲು ಅವಕಾಶ ನೀಡಬಾರದು.
ಮಗುವಿನ ರಕ್ಷಣೆ, ಪೋಷಣೆ ಮತ್ತು ಹಿತಾಸಕ್ತಿಯನ್ನು ಕಾಪಾಡಲು ನಿರ್ಮಾಣ ಅಥವಾ ಕಾರ್ಯಕ್ರಮದಲ್ಲಿ ತೊಡಗಿರುವ ಪ್ರತಿ 5 ಮಕ್ಕಳಿಗೆ ಒಬ್ಬರಂತೆ ಜವಾಬ್ದಾರಿ ವ್ಯಕ್ತಿಯನ್ನು ನೇಮಿಸುವುದು.
ನಿರ್ಮಾಣ ಅಥವಾ ಕಾರ್ಯಕ್ರಮದಿಂದ ಮಗುವಿಗೆ ಬರುವ ಒಟ್ಟು ಆದಾಯದ ಕನಿಷ್ಠ ಶೇ.20% ನ್ನು ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಮಗುವಿನ ಹೆಸರಿನಲ್ಲಿ ನಿಶ್ಚಿತ ಠೇವಣಿ ಖಾತೆ ತೆರೆದು ಇಡಬೇಕು ಅದನ್ನು ಮಗು ಪ್ರಾಯಸ್ಥನಾದಾಗ ಪಡೆಯಲು ಅವಕಾಶ ಕಲ್ಪಿಸುವುದು.
ಯಾವುದೇ ಮಗುವಿನ ಒಪ್ಪಿಗೆ ಮತ್ತು ಇಚ್ಚೆಗೆ ವಿರುದ್ಧವಾಗಿ ಯಾವುದೇ ಧ್ವನಿ, ದೃಶ್ಯ ಮತ್ತು ಕ್ರೀಡಾ ಚಟುವಟಿಕೆ ಅನೌಪಾಚಾರಿಕ ಮನರಂಜನಾ ಚಟುವಟಿಕೆ ಒಳಗೊಂಡಂತೆ ಅವುಗಳಲ್ಲಿ ಭಾಗವಹಿಸುವಂತೆ ಮಾಡಬಾರದು ಎಂದು ಜಿಲ್ಲಾ ಕಾರ್ಮಿಕ ಯೋಜನಾ ಸಂಘದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.