ಉಡುಪಿ , ಮಾ 21(DaijiworldNews/ AK): ಉಡುಪಿ ನಗರಸಭೆಯ ಬಡಗಬೆಟ್ಟು ಚಿಟ್ಪಾಡಿ ಗ್ರಾಮದ ಸರ್ವೇ ನಂ. 46/77 ರಲ್ಲಿ ವಸತಿ ಉದ್ದೇಶಕ್ಕಾಗಿ ಭೂಪರಿವರ್ತನೆಗೊಂಡ ನಿವೇಶನದಲ್ಲಿ ವಾಣಿಜ್ಯ ಉದ್ದೇಶದ ಅನಧಿಕೃತ ಸಮುದಾಯ ಭವನ ನಿಯಮ ಮೀರಿ ರಾಜ ಕಾಲುವೆ ಅತಿಕ್ರಮಿಸಿ ನಿರ್ಮಿಸಿದ ಅಕ್ರಮ ಕಟ್ಟಡದ ಬಗ್ಗೆ ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿ ಪ್ರಕರಣ ಹಿಂಪಡೆಯಲು ಕೋರಿರುವ ಬಗ್ಗೆ ಉಡುಪಿ ನಗರಸಭಾ ಪೌರಾಯುಕ್ತರಿಗೆ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ನೋಟಿಸ್ ನೀಡಿದೆ.
ಈ ಬಗ್ಗೆ ಸೂಕ್ತ ದಾಖಲೆಗಳೊಂದಿಗೆ ಸಮಾಜಾಯಿಷಿ ನೀಡಲು ಸೂಚಿಸಿದ್ದು ತಪ್ಪಿದಲ್ಲಿ ಸಿ ಸಿ ಎ ನಿಯಮಾವಳಿಯಂತೆ ಶಿಸ್ತು ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಸೆಟ್ ಬ್ಯಾಕ್ ಉಲ್ಲಂಘಿಸಿ, ಬಫರ್ ಝೋನ್ ಬಿಡದೇ ರಾಜಕಾಲುವೆಯನ್ನು ಅತಿಕ್ರಮಿಸಿ ನಿರ್ಮಿಸಿದ ಈ ಅಕ್ರಮ ಪ್ರಾರ್ಥನಾ ಮಂದಿರ ಕಟ್ಟಡದ ವಿರುದ್ಧ ಈಗಾಗಲೇ ನಗರಸಭಾ ಸದಸ್ಯರಾದ ಕೃಷ್ಣ ಕೊಡಂಚರವರು ಹೈಕೋರ್ಟ್ ನಲ್ಲಿ ದಾವೆ ಹೂಡಿದ್ದು, ಉಡುಪಿ ಜೆ ಎಂ ಎಫ್ ನ್ಯಾಯಾಲಯದಲ್ಲಿಯೂ ದೂರು ದಾಖಲಾಗಿದ್ದರೂ ಪೌರಾಯುಕ್ತರು ನಗರಸಭೆಯ ವಕೀಲರಿಗೆ ಪತ್ರ ಬರೆದು ಸದ್ರಿ ಕಟ್ಟಡದಲ್ಲಿ ಯಾವುದೇ ಉಲ್ಲಂಘನೆ ಕಂಡು ಬಂದಿಲ್ಲ ಎಂದು ತಪ್ಪು ಮಾಹಿತಿ ನೀಡಿ ಪ್ರಕರಣ ಹಿಂಪಡೆಯಲು ಪೌರಾಯುಕ್ತರು ಪತ್ರ ಬರೆದಿದ್ದಾರೆ.
ಕಟ್ಟಡದ ವಿರುದ್ಧ ವ್ಯಾಜ್ಯ ದಾಖಲಾಗಿದ್ದರೂ ಈ ಬಗ್ಗೆ ನಗರಸಭೆಯಿಂದ ಯಾವುದೇ ನಿರ್ಣಯ ಕೈಗೊಳ್ಳದೇ, ತಾಂತ್ರಿಕ ವರದಿ ಹಾಗೂ ಆಕ್ಷೇಪಣೆಗಳನ್ನು ಪರಿಗಣಿಸದೆ ಅಧಿಕಾರ ದುರುಪಯೋಗ ಪಡಿಸಿಕೊಳ್ಳುವ ಮೂಲಕ ಕಟ್ಟಡ ಮಾಲೀಕರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಅಕ್ರಮ ಎಸಗಿದ್ದಾರೆ.
ಉಡುಪಿ ಶಾಸಕರಾದ ಯಶ್ ಪಾಲ್ ಸುವರ್ಣ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿ ಅಕ್ರಮಕ್ಕೆ ಸಹಕರಿಸಿದ ಪೌರಾಯುಕ್ತರ ವಿರುದ್ದ ಕಠಿಣ ಕ್ರಮ ಹಾಗೂ ಅಕ್ರಮ ಕಟ್ಟಡ ನಿರ್ಮಿಸಿದ ಸಂಸ್ಥೆಯ ವಿರುದ್ಧ ಕ್ರಮ ಕೈಗೊಳ್ಳಲು ಪತ್ರ ಬರೆದ ಹಿನ್ನೆಲೆಯಲ್ಲಿ ನೊಟೀಸ್ ಜಾರಿಯಾಗಿದೆ.
ಇಷ್ಟೆಲ್ಲಾ ಅಕ್ರಮಗಳ ನಡುವೆಯೂ ಈ ಅನಧಿಕೃತ ಕಟ್ಟಡಕ್ಕೆ ತರಾತುರಿಯಲ್ಲಿ 1.74 ಕೋಟಿ ಅಂದಾಜು ವೆಚ್ಚದ ಕಟ್ಟಡಕ್ಕೆ ಜಿಲ್ಲಾಧಿಕಾರಿಯವರು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೂಲಕ ಗರಿಷ್ಠ ಅನುದಾನ ಒದಗಿಸಲು ಶಿಫಾರಸ್ಸು ಮಾಡಿದ್ದಾರೆ ಎಂದು ಶಾಸಕ ಯಶ್ ಪಾಲ್ ಸುವರ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.