ಉಡುಪಿ, ಮಾ 21(DaijiworldNews/AA): ತುರ್ತು ಸೇವೆಯಾದ 108 ಆರೋಗ್ಯ ಕವಚ ಸಿಬ್ಬಂದಿಗಳಿಗೆ ಸರಿಯಾದ ರೀತಿಯಲ್ಲಿ ಸಂಬಳ ನೀಡದೇ ಕಳೆದ ನವೆಂಬರ್ ನಿಂದ ಸಂಬಳದಲ್ಲಿ ಸುಮಾರು ೬ ಸಾವಿರ ರುಪಾಯಿಯಷ್ಟು ಕಡಿತ ಮಾಡಲಾಗುತ್ತಿದೆ ಎಂದು 108 ಆರೋಗ್ಯ ಕವಚ ಸಿಬ್ಬಂದಿಗಳು ಆರೋಪಿಸಿದ್ದಾರೆ.
ಸುವರ್ಣ ಕರ್ನಾಟಕ ಆರೋಗ್ಯ ಕವಚ ನೌಕರರ ಸಂಘ ವತಿಯಿಂದ ಉಡುಪಿಯ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಚಾಲಕ ಕೊಟ್ರಪ್ಪ.ಜಿ ಅವರು, 36 ಸಾವಿರ ರೂ ಸಂಬಳ ಬರುತ್ತಿತ್ತು. ಕಳೆದ ಕೆಲವು ತಿಂಗಳಿನಿಂದ 6 ಸಾವಿರ ರೂ. ವೇತನ ಕಡಿತ ಮಾಡಲಾಗಿದೆ. ಗುತ್ತಿಗೆ ಸಂಸ್ಥೆಯನ್ನು ಪ್ರಶ್ನಿಸಿದರೇ ಯಾವುದಕ್ಕೂ ಉತ್ತರವನ್ನು ನೀಡಿಲ್ಲ. ಜಿಲ್ಲಾಧಿಕಾರಿ ಹಾಗು ಜಿಲ್ಲಾ ಆರೋಗ್ಯಧಿಕಾರಿಯವರ ಮೂಲಕ ಆರೋಗ್ಯ ಸಚಿವರಿಗೆ ಮನವಿ ನೀಡುತ್ತೇವೆ. ಇದೇ ರೀತಿ ಕಾರಣವಿಲ್ಲದೇ ವೇತನ ಕಡಿತಗೊಂಡರೇ ನಮ್ಮ ಕುಟುಂಬ ಸಂಸಾರ ನಡೆಯುವುದು ಹೇಗೆ..? ಮಕ್ಕಳ ಶಿಕ್ಷಣಕ್ಕೆ ಶಾಲಾ ಶುಲ್ಕವನ್ನು ಭರಿಸಲು ಕಷ್ಟವಾಗುತ್ತಿದೆ ಎಂದು ಅಳಲನ್ನು ತೋಡಿಕೊಂಡಿದ್ದಾರೆ.
ಉಡುಪಿಯ 108 ಆರೋಗ್ಯ ಕವಚ ಯೋಜನೆಯಲ್ಲಿ ಗುತ್ತಿಗೆ ಆಧಾರಿತವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಚಾಲಕರು ಹಾಗು ಸಿಬ್ಬಂದಿಗಳಿಗೆ ಗುತ್ತಿಗೆ ಪಡೆದ ಜಿ.ವಿ.ಕೆ ಸಂಸ್ಥೆಯು ಕಳೆದ ಮೂರು ತಿಂಗಳಿನಿಂದ ವೇತನದಲ್ಲಿ 6 ಸಾವಿರ ರೂ. ಕಡಿತಗೊಳಿಸುತ್ತಿದ್ದಾರೆ. ಆದರೆ ಯಾವ ಕಾರಣಕ್ಕಾಗಿ ಕಡಿತಗೊಳ್ಳುತ್ತಿದೆ ಎಂಬುದಕ್ಕೆ ಸಂಸ್ಥೆಯು ಉತ್ತರಿಸಿಲ್ಲ ಎಂದು ಚಾಲಕರು ತಿಳಿಸಿದ್ದಾರೆ.
ಜಿಲ್ಪಾಸ್ಪತ್ರೆಯ ಅಧೀನದಲ್ಲಿ 18 ಆರೋಗ್ಯ ಕವಚ 108 ಆ್ಯಂಬುಲೆನ್ಸ್ ಗಳಿದೆ. ಒಟ್ಟು 90 ಸಿಬ್ಬಂದಿಗಳ ಅವಶ್ಯಕತೆ ಇರುವಲ್ಲಿ 45 ಚಾಲಕರು ಮತ್ತು 15 ಸಿಬ್ಬಂದಿ ಸೇರಿದಂತೆ ಒಟ್ಟು 60 ಜನರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೇವಲ ಉಡುಪಿ ಜಿಲ್ಲೆಯಲ್ಲಿ ಮಾತ್ರವಲ್ಲದೆ ರಾಜ್ಯಾದ್ಯಂತ 3,500 ಸಾವಿರ ಸಿಬ್ಬಂದಿಗಳ ವೇತನವನ್ನು ಕಡಿತ ಮಾಡಲಾಗಿದೆ ಎಂದು ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಸಿಬ್ಬಂದಿಗಳಾದ ಕಿಶೋರ್ ಕುಮಾರ್, ಶಾಂತೇ ಗೌಡ, ವಿಶ್ವನಾಥ್ ಉಪಸ್ಥಿತರಿದ್ದರು.