ಉಳ್ಳಾಲ, ಮಾ 21(DaijiworldNews/AA): ಮರಳು ಅಡ್ಡೆಗೆ ಸಿಸಿಬಿ ಪೊಲೀಸರು, ಭೂ ಮತ್ತು ಗಣಿ ವಿಜ್ಞಾನ ಅಧಿಕಾರಿಗಳು ಜಂಟಿಯಾಗಿ ದಾಳಿ ನಡೆಸಿ ಅಪಾರ ಪ್ರಮಾಣದಲ್ಲಿ ದಾಸ್ತಾನಿರಿಸಿದ್ದ ಮರಳು ಮತ್ತು ಹೊಳೆಯಲ್ಲಿ ಮರಳು ಸಾಗಾಟ ನಡೆಸುತ್ತಿದ್ದ ನಾಲ್ಕು ನಾಡದೋಣಿಗಳನ್ನು ವಶಕ್ಕೆ ಪಡೆದ ಘಟನೆ ಉಳ್ಳಾಲ ಸೋಮೇಶ್ವರ ಉಚ್ಚಿಲದ ನಾಗತೋಟ ಎಂಬಲ್ಲಿನ ಖಾಸಗಿ ಜಾಗದಲ್ಲಿ ನಡೆದಿದೆ.
ಸಿಸಿಬಿ ಪೊಲೀಸರೊಂದಿಗೆ ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿಗಳ ತಂಡವು ನಾಗತೋಟದ ಅಕ್ರಮ ಮರಳು ಅಡ್ಡೆಗೆ ದಿಢೀರ್ ದಾಳಿ ನಡೆಸಿ ಬಳಿಕ ಸ್ಥಳೀಯ ಪೊಲೀಸರಿಗೂ ಮಾಹಿತಿ ನೀಡಿದ್ದು ಸ್ಥಳಕ್ಕೆ ಬಂದ ಉಳ್ಳಾಲ ಪೊಲೀಸರು ಸೇರಿ ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದ ಆರೋಪಿಗಳಾದ ಕುಂಜತ್ತೂರಿನ ಜಯರಾಮ್ ಶೆಟ್ಟಿ , ಇಬ್ರಾಹಿಂ ಕೋಟೆಪುರ, ವಿನೋದ್ ಉಚ್ಚಿಲ್ ಯಾನೆ ಹನಿ ಹಿಂದುಸ್ಥಾನಿ, ಚಂದ್ರ ಸೋಮೇಶ್ವರ ಮತ್ತು ಸುನಿಲ್ ತಲೆಮರೆಸಿಕೊಂಡಿದ್ದಾರೆ. ಹಾಗೂ ಪೊಲೀಸರು ವಶಕ್ಕೆ ಪಡೆದ ಅಪಾರ ಪ್ರಮಾಣದ ಮರಳು ಮತ್ತು ನಾಡ ದೋಣಿಗಳನ್ನು ಭೂ ಮತ್ತು ಗಣಿ ವಿಜ್ನಾನ ಇಲಾಖಾಧಿರಿಗಳಿಗೆ ಹಸ್ತಾಂತರಿಸಿದ್ದಾರೆ.
ಸೋಮೇಶ್ವರ ಉಚ್ಚಿಲದ ಬಟ್ಟಪ್ಪಾಡಿ ಸಮುದ್ರ ತೀರದಿಂದ ದಿನನಿತ್ಯವೂ ಅಕ್ರಮವಾಗಿ ಮರಳು ತೆಗೆದು ನಾಡ ದೋಣಿಗಳ ಮೂಲಕ ಹೊಳೆಯಲ್ಲಿ ಸಾಗಾಟ ನಡೆಸಲಾಗುತ್ತಿದ್ದು, ನಾಗತೋಟ ನಿವಾಸಿ ಮಹಮ್ಮದ್ ಆಲಿ ಎಂಬವರ ಖಾಸಗಿ ಜಮೀನಿನಲ್ಲಿ ಅಕ್ರಮವಾಗಿ ಮರಳು ದಾಸ್ತಾನು ಇರಿಸಲಾಗುತ್ತಿತ್ತು. ದಾಸ್ತಾನು ಇರಿಸಿದ್ದ ಈ ಮರಳು ಮಧ್ಯ ರಾತ್ರಿ ಕೇರಳಕ್ಕೆ ಸಾಗಾಟವಾಗುತ್ತಿತ್ತು. ಬಟ್ಟಪ್ಪಾಡಿಯಲ್ಲಿ ನಡೆಯುತ್ತಿದ್ದ ಮರಳು ಮಾಫಿಯಾ ಬಗ್ಗೆ ಸ್ಥಳೀಯ ಸಾಮಾಜಿಕ ಕಾರ್ಯಕರ್ತರಾದ ಸುಖೇಶ್ ಉಚ್ಚಿಲ್ ಮತ್ತು ರಂಜಿತ್ ಬಟ್ಟಪ್ಪಾಡಿ ಅವರು ಸ್ಥಳೀಯ ಪೊಲೀಸರಿಗೆ ಪದೇ ಪದೇ ದೂರು ನೀಡಿದ್ದರೂ ಅಕ್ರಮ ಮರಳುಗಾರಿಕೆಗೆ ಕಡಿವಾಣ ಬಿದ್ದಿರಲಿಲ್ಲ. ಎಗ್ಗಿಲ್ಲದೆ ಮುಂದುವರೆದಿದ್ದ ಅಕ್ರಮ ಮರಳುಗಾರಿಕೆಯ ಬಗ್ಗೆ ಸುಖೇಶ್ ಮತ್ತು ರಂಜಿತ್ ಅವರು ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ಅವರಿಗೆ ಮಾಹಿತಿ ನೀಡಿದ್ದಾರೆ. ಇದೀಗ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಮರಳು ಅಡ್ಡೆಗೆ ದಾಳಿ ನಡೆಸಲಾಗಿದೆ ಎನ್ನಲಾಗಿದೆ. ಅಕ್ರಮ ಮರಳನ್ನು ದಾಸ್ತಾನು ಇರಿಸಿ ಮರಳು ಮಾಫಿಯಾಗಳನ್ನು ಬೆಂಬಲಿಸುತ್ತಿದ್ದ ಮಹಮ್ಮದ್ ಆಲಿ ಅವರ ಜಮೀನನ್ನು ಮುಟ್ಟು ಗೋಳು ಹಾಕುವಂತೆ ಸುಖೇಶ್ ಉಚ್ಚಿಲ್ ಅವರು ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದ್ದಾರೆ.