ಕುಂದಾಪುರ, ಮಾ 20(DaijiworldNews/ AK):ಹೆಮ್ಮಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಟ್ಟು ಎಂಬಲ್ಲಿ ನಾದುರಸ್ತಿಯಲ್ಲಿದ್ದ ಹರಿಯುವ ನೀರಿನ ತೋಡಿಗೆ ಅವೈಜ್ಞಾನಿಕವಾಗಿ ರಿವಿಟ್ ಮೆಂಟ್ ಮಾಡುತ್ತಿರುವ ಗ್ರಾಮ ಪಂಚಾಯತ್ ವಿರುದ್ಧ ಗ್ರಾಮಸ್ಥರು ಬುಧವಾರ ಪ್ರತಿಭಟನೆ ನಡೆಸಿದರು.
ಈ ಸಂದರ್ಭ ಗ್ರಾಮಸ್ಥರ ಪರವಾಗಿ ಮಾತನಾಡಿದ ಸಂತೋಷ್ ಹೆಮ್ಮಾಡಿ, ದುರಸ್ತಿಯಿಲ್ಲದ ಮೋರಿಯನ್ನು ರಿಪೇರಿ ಮಾಡದೇ ಅವೈಜ್ಞಾನಿಕವಾಗಿ ರಿವೆಟ್ ಮೆಂಟ್ ಕಟ್ಟಲಾಗುತ್ತಿದೆ ಎಂದು ಆರೋಪಿಸಿದರು. ಈ ರೀತಿ ಕಾಮಗಾರಿ ನಡೆಸಿದರೆ ಸುಮಾರು 61ಕುಟುಂಬಗಳಿರುವ ಕನಿಷ್ಟ 10 ಎಕ್ರ ಕೃಷಿ ಭೂಮಿಯಲ್ಲಿ ಮಳೆಗಾಲದಲ್ಲಿ ನೀರು ನಿಂತು ಬೇಸಾಯದ ಬೆಳೆ ನಾಶವಾಗುತ್ತದೆ ಎಂದು ಆರೋಪಿಸಿದ ಅವರು ಈ ಬಗ್ಗೆ ಪಂಚಾಯತ್ ಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದರು.
ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಕಾಮಗಾರಿಗೆ ಆಕ್ಷೇಪಣೆ ಪತ್ರ ನೀಡಿದರೂ ಗ್ರಾಮ ಪಂಚಾಯತ್ ಕಾಮಗಾರಿ ಅವೈಜ್ಞಾನಿಕ ಕಾಮಗಾರಿ ಮುಂದುವರಿಸಿದೆ. ತಕ್ಷಣ ಕಾಮಗಾರಿ ನಿಲ್ಲಿಸಬೇಕು ಮತ್ತು ಹೊಳೆ ತೋಡುಗಳ ಹೂಳೆತ್ತಿದ ಬಳಿಕ ಕಾಮಗಾರಿಯನ್ನು ವೈಜ್ಞಾನಿಕವಾಗಿ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ. ಈ ಸಂದರ್ಭ ಅಧ್ಯಕ್ಷೆ ನೇತ್ರಾವತಿ, ಉಪಾಧ್ಯಕ್ಷೆ ಶೋಭಾ ಕಾಂಚನ್, ಸದಸ್ಯ ರಿಚರ್ಡ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.