ಪುತ್ತೂರು, ಏ 30 (Daijiworld News/MSP): ಒಂದೆರಡು ಬಾರಿಯಲ್ಲ ಸ್ಕೋಲಿಯೋಸಿಸ್ನಿಂದ ಈಗಾಗಲೆ 6 ಬಾರಿ ಶಸ್ತ್ರ ಚಿಕಿತ್ಸೆ ಒಳಗಾಗಿ ಅಪಾರ ನೋವು ಅನುಭವಿಸಿದ ಪುತ್ತೂರಿನ ವಿದ್ಯಾರ್ಥಿನಿ ಇದೀಗ ತನ್ನ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ರಾಜ್ಯದಲ್ಲೇ ದ್ವಿತೀಯ ಸ್ಥಾನ ಪಡೆದು ತನ್ನ ಸಾಧನೆಯಿಂದ ಎಲ್ಲರನ್ನು ಮೆಚ್ಚಿಸುವಂತೆ ಮಾಡಿದ್ದಾಳೆ.
ಪುತ್ತೂರಿನ ಕೋಡಂಕೇರಿ ಬಂಗಾರಡ್ಕ ನಿವಾಸಿ ಕೃಷಿಕರಾಗಿರುವ ಮುರಳೀಧರ ಮತ್ತು ಶೋಭಾ ದಂಪತಿಯ ಪುತ್ರಿಯಾಗಿರುವ ಸಿಂಚನಾ , ವಿವೇಕಾನಂದ ಇಂಗ್ಲೀಷ್ ಮಿಡಿಯಂ ಹೈಸ್ಕೂಲ್ನ ವಿದ್ಯಾರ್ಥಿನಿಯಾಗಿದ್ದು 625ಕ್ಕೆ 624 ಅಂಕಗಳನ್ನು ಪಡೆದು ಹೆತ್ತವರಿಗೆ ಮತ್ತು ಶಾಲೆಗೂ ಕೀರ್ತಿ ತಂದಿದ್ದಾಳೆ.
ಸಣ್ಣ ವಯಸ್ಸಿನಿಂದಲೇ ಕುತ್ತಿಗೆ ಎಲುಬಿನ ಹೆಚ್ಚುವರಿ ಬೆಳವಣಿಗೆಯ ಕಾರಣಕ್ಕಾಗಿ ಅಪಾರ ನೋವು ಅನುಭವಿಸಿದ ಸಿಂಚನಾಳ ಚಿಕಿತ್ಸೆಗಾಗಿಯೇ ಹೆತ್ತವರು 25 ಲಕ್ಷಕ್ಕೂ ಹೆಚ್ಚು ಹಣ ವ್ಯಯಿಸಿದ್ದಾರೆ. ಸ್ಕೋಲಿಯೋಸಿಸ್ನಿಂದ ಬಳಲುತ್ತಿರುವ ಛಲದಂಕೆ ಅಭ್ಯಾಸದ ವೇಳೆಯಲ್ಲಿ ತಲೆ ತಗ್ಗಿಸಬೇಕಾದರೆ ಅಪಾರ ನೋವಿನ ಹಿಂಸೆ. ಹೀಗಾಗಿ ಚಿಕಿತ್ಸೆಗಾಗಿ ದೂರದ ಕೊಯಂಬತ್ತೂರಿಗೆ ಸರ್ಜರಿಗಾಗಿ ಹೋಗುವುದರೊಂದಿಗೆ ತರಗತಿಗೂ ಗೈರು ಹಾಜರಾಗುವುದು ಅನಿವಾರ್ಯವಾಗಿತ್ತು. ಸರ್ಜರಿಯ ಬಳಿಕ ತೊಡಕು ನಿವಾರಣೆಯಾದರೂ, ಗೈರು ಹಾಜರಾದ ದಿನಗಳ ಪಾಠಗಳನ್ನು ಅಭ್ಯಾಸಿಸಬೇಕಿತ್ತು.
ಆದರೆ ಸಾಧಿಸುವ ಮನಸ್ಸೊಂದಿದ್ದರೆ ಯಾವುದೂ ಅಡೆತಡೆಯಾಗುವುದಿಲ್ಲ ಎನ್ನುವುದನ್ನು ಸಾಬೀತು ಮಾಡಿದ ಸಿಂಚನಾ ಲಕ್ಷ್ಮೀ ಎಲ್ಲ ವಿದ್ಯಾರ್ಥಿಗಳಿಗೂ ಮಾದರಿಯಾಗಿದ್ದಾಳೆ.