ಮಂಗಳೂರು, ಮಾ 20(DaijiworldNews/MS): ಲಾರಿಗಳ ನಂಬರ್ ಪ್ಲೇಟ್ ಗೆ ಗ್ರೀಸ್ ಹಚ್ಚಿ ಹಾಗೂ ಸ್ಟಿಕ್ಕರ್ ಬಳಸಿ ಮರೆಮಾಚಿಸಿ ಕೊಣಾಜೆ, ಮಂಗಳೂರು ಗ್ರಾಮಾಂತರ, ಉಳ್ಳಾಲ ಪೊಲೀಸ್ ಠಾಣೆಗಳ ಸರಹದ್ದಿನಲ್ಲಿ ಪೊಲೀಸರ ಸಮ್ಮುಖದಲ್ಲೇ ಮರಳು ಸಾಗಾಟ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಈ ನಡುವೆ ಮಂಗಳವಾರ ತಡರಾತ್ರಿ ಅಡ್ಯಾರ್ ಕಣ್ಣೂರು ಸಮೀಪ ನಂಬರ್ ಪ್ಲೇಟ್ ಮಾಸಿದ ಮರಳು ಸಾಗಾಟದ ಲಾರಿ ಡಿವೈಡರಿಗೆ ಢಿಕ್ಕಿ ಹೊಡೆದ ಪರಿಣಾಮ ಸಾರ್ವಜನಿಕರು ಲಾರಿಗಳನ್ನು ತಡೆಹಿಡಿದಿದ್ದಾರೆ.
ಮಂಗಳವಾರ ರಾತ್ರಿ ವೇಳೆ ಒಂದರ ಹಿಂದೆ ಇನ್ನೊಂದರಂತೆ ಮರಳು ಸಾಗಾಟದ ಲಾರಿಗಳು ಬಿ.ಸಿರೋಡ್ ಮಾರ್ಗವಾಗಿ ಚಲಿಸುವ ವೇಳೆ ಚಾಲಕನ ನಿಯಂತ್ರಣ ಕಳೆದುಕೊಂಡು ಕಾರೊಂದಕ್ಕೆ ಢಿಕ್ಕಿ ಹೊಡೆಯುವುದರಿಂದ ತಪ್ಪಿ ರಸ್ತೆ ಡಿವೈಡರಿಗೆ ಹಾಗೂ ಬ್ಯಾರಿಕೇಡಿಗೆ ಢಿಕ್ಕಿ ಹೊಡೆದಿದೆ. ಬಳಿಕ ಕಾರು ಚಾಲಕರು ರಸ್ತೆಗಿಳಿದು ಲಾರಿಯನ್ನು ಅಡ್ಡಗಟ್ಟಲು ಯತ್ನಿಸಿದ್ದಾರೆ. ಜೊತೆಗೆ ಸ್ಥಳೀಯರು ಜಮಾಯಿಸಿ ಲಾರಿಗಳನ್ನು ತಡೆಹಿಡಿಯಲು ಯತ್ನಿಸಿದ್ದು, ಈ ವೇಳೆ ಎರಡೂ ಮರಳು ಸಾಗಾಟದ ಲಾರಿಗಳು ಪರಾರಿಯಾಗಿವೆ. ನಂತರ ಸಾಲು ಸಾಲಾಗಿ ಬರುತ್ತಿದ್ದ ಲಾರಿಗಳನ್ನು ತಡೆಹಿಡಿದ ಸಾರ್ವಜನಿಕರು ಪೊಲೀಸರು ಬರುವವರೆಗೆ ರಸ್ತೆ ತಡೆಹಿಡಿದಿದ್ದಾರೆ. ಅಲ್ಲದೆ ಪೊಲೀಸ್ ಸಮ್ಮುಖದಲ್ಲೇ ಮರಳು ಸಾಗಾಟ ಅವ್ಯಾಹತವಾಗಿ ನಡೆಯುತ್ತಿರುವ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಸ್ಥಳದಲ್ಲಿ ಮರಳು ಮಾಫಿಯಾ ಹಾಗೂ ಸಾರ್ವಜನಿಕರು ಜಮಾಯಿಸಿ ತೀವ್ರ ವಾಗ್ವಾದಗಳು ನಡೆದಿದ್ದು, ಈ ನಡುವೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಬಂದು, ಉದ್ರಿಕ್ತರನ್ನು ಸಮಾಧಾನಿಸಲು ಯತ್ನಿಸಿದರೂ ಫಲಕಾರಿಯಾಗಲಿಲ್ಲ. ಮತ್ತೆ ಲಾರಿಗಳು ಬರುವುದನ್ನು ತಡೆಹಿಡಿದ ಸಾರ್ವಜನಿಕರು ಲಾರಿಗೆ ನಂಬರಿಲ್ಲದೇ ಇರುವ ವೀಡಿಯೋ ತೆಗೆದು ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಆಗಮಿಸದೇ ಇರುವುದನ್ನು ಪ್ರಶ್ನಿಸಿದ್ದಾರೆ. ಈ ಮಧ್ಯೆ ಸ್ಥಳೀಯರೊಬ್ಬರು ತನ್ನ ಕಾರಿನಲ್ಲಿ ಹಾಕಿ ಸ್ಟಿಕ್ ತಂದು ಹಲ್ಲೆಗೆ ಮುಂದಾಗಿರುವುದನ್ನು ಪ್ರಶ್ನಿಸಿದ ಮರಳು ಮಾಫಿಯಾಕೋರರು, ಕಾರನ್ನು ವಶಪಡಿಸಿಕೊಳ್ಳುವಂತೆ ಬೊಬ್ಬೆ ಹಾಕಿದ್ದಾರೆ. ಇದು ಪರಿಸ್ಥಿತಿಯನ್ನು ಇನ್ನಷ್ಟು ಉಲ್ಬಣಗೊಳಿಸಿ ಇತ್ತಂಡಗಳ ನಡುವೆ ವಾಗ್ವಾದಗಳು ಹೆಚ್ಚಾಗಿ ಹೊಡೆದಾಟದ ಹಂತಕ್ಕೆ ತಲುಪಿತ್ತು. ಇನ್ನಷ್ಟು ಹೆಚ್ವುವರಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಸ್ಥಳದಲ್ಲಿ ನೆರೆದಿದ್ದವರನ್ನು ವಾಪಸ್ಸು ಕಳುಹಿಸಿ, ನಂಬರ್ ಪ್ಲೇಟ್ ಮಾಸಿದ ರೀತಿಯಲ್ಲಿದ್ದ ಒಂದು ಟಿಪ್ಪರ್ ಲಾರಿಯನ್ನು ವಶಪಡಿಸಿಕೊಂಡಿದ್ದಾರೆ.
ಎಸಿಪಿ ಮೌನ - ಆರೋಪ
ಮಂಗಳೂರು ದಕ್ಷಿಣ ಠಾಣಾ ವ್ಯಾಪ್ತಿಗೆ ಬರುವ ಮೂರು ಠಾಣೆಗಳ ಎದುರೇ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ. ಇವೆಲ್ಲವನ್ನು ನಿಯಂತ್ರಿಸಬೇಕಾದ ಎಸಿಪಿ ಧನ್ಯಾ ನಾಯಕ್ ಅವರು ಲಾರಿಗಳ ಆರ್ಬಟವನ್ನು ಗಮನಿಸಿಯೂ ಕಣ್ಣಿದ್ದೂ ಕುರುಡರಾಗಿದ್ದಾರೆ ಅನ್ನುವ ಆರೋಪವನ್ನು ಸಾರ್ವಜನಿಕರು ಮಾಡಿದ್ದಾರೆ.
ಹಣ , ಹೆಂಡ, ಸ್ಫೋಟಕ ಸಾಗಾಟದ ಶಂಕೆ
ಗಡಿಭಾಗ ಸೇರಿದಂತೆ ರಾ.ಹೆ.ಗಳ ಅಲ್ಲಲ್ಲಿ ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ವಾಹನ ತಪಾಸಣೆಗಾಗಿ ಸಿಆರ್ ಪಿ ಎಫ್ ಯೋಧರು ಹಾಗೂ ಪೊಲೀಸರು, ಇತರೆ ಇಲಾಖೆಗಳ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಕಾರು, ದ್ವಿಚಕ್ರ ವಾಹನ, ಮಾತ್ರ ಪರಿಶೀಲನೆ ನಡೆಸುತ್ತಿರುವ ಚುನಾವಣಾ ಜರೂರಿನಲ್ಲಿರುವ ಸಿಬ್ಬಂದಿ, ಮಾಸಿದ ನಂಬರ್ ಪ್ಲೇಟ್ ಹಾಕಿ ಅವ್ಯಾಹತವಾಗಿ ಮರಳು ಸಾಗಾಟದ ಲಾರಿಗಳನ್ನು ಪತ್ತೆಮಾಡುತ್ತಿಲ್ಲ. ಆದರೆ ಕೇರಳ ಭಾಗ ಹಾಗೂ ಇತರೆ ಗಡಿಪ್ರದೇಶದಿಂದ ಮರಳು ಲಾರಿಗಳು ಮರಳಿನಡಿ ಸ್ಫೋಟಕವಾಗಲಿ , ಹಣವನ್ನಾಗಲಿ ಸಾಗಾಟ ನಡೆಸುತ್ತಾ ಇದ್ದರೆ ಪೊಲೀಸರ ಗಮನಕ್ಕೆ ಬರುವುದಿಲ್ಲ ಎಂದು ಸಾರ್ವಜನಿಕರು ಆಪಾದಿಸಿದ್ದಾರೆ.
ಕಾಂಗ್ರೆಸ್ ಮುಖಂಡರು ಭಾಗಿ
ಮರಳು ಸಾಗಾಟದ ಹಿಂದೆ ತಲಪಾಡಿ ಮೂಲದ ಕಾಂಗ್ರೆಸ್ ಮುಖಂಡರು ಸಕ್ರಿಯವಾಗಿದ್ದು, ಇದಕ್ಕೆ ಘಟನೆ ನಡೆದ ಸ್ಥಳದಲ್ಲೇ ಅವರು ಉಪಸ್ಥಿತರಿದ್ದು, ಲಾರಿಗಳನ್ನು ಬಿಡುವಂತೆ ಒತ್ತಾಯಿಸುತ್ತಿದುದು ಹಲವರ ಅಸಮಧಾನಕ್ಕೆ ಕಾರಣವಾಯಿತು.