ಬಂಟ್ವಾಳ, ಮಾ 18(DaijiworldNews/AA): ರೈಲ್ವೇ ಮೇಲ್ಸೇತುವೆ ಇರುವ ಸ್ಥಳಗಳಲ್ಲಿ ಸೇತುವೆ ಭದ್ರತೆಗಾಗಿ ಇಕ್ಕೆಲಗಳಲ್ಲಿ ಸೇಫ್ ಗಾರ್ಡ್ ಹಾಕುವುದು ವಾಡಿಕೆ. ಇದೇ ರೀತಿ ಬಂಟ್ವಾಳ ಮಿತ್ತೂರಿನಲ್ಲಿ ಹಾಕಲಾಗಿದ್ದ ಸೇಫ್ ಗಾರ್ಡ್ ಗೆ ಸೋಮವಾರ ಬೆಳಗ್ಗಿನ ಜಾವ ಲಾರಿಯೊಂದು ಡಿಕ್ಕಿಹೊಡೆದು ಪರಾರಿಯಾಗಿದ್ದು ಸೇಫ್ ಗಾರ್ಡ್ ನ ಮುರಿದ ಕಂಬ ರಸ್ತೆಯಲ್ಲಿಯೇ ನೇತಾಡುತ್ತಿದ್ದು ಅಪಾಯವನ್ನು ಆಹ್ವಾನಿಸುವಂತಿದೆ.
ರೈಲ್ವೇ ಇಲಾಖೆಯ ಮೇಲ್ಮಟ್ಟದ ಅಧಿಕಾರಿವರೆಗೂ ಈ ಕುರಿತು ಮಾಹಿತಿ ಇದ್ದರೂ ಸಂಬಂಧಪಟ್ಟ ಯಂತ್ರ ಸಿಕ್ಕಿಲ್ಲ ಎಂಬ ಕಾರಣಕ್ಕೆ ನೇತಾಡುತ್ತಿರುವ ಕಂಬ ಇನ್ನೂ ತೆರವಾಗಿಲ್ಲ. ರಾತ್ರಿ ಹೊತ್ತಿನಲ್ಲಿ ಭಾರಿ ಸಂಖ್ಯೆಯ ಬಸ್ಸುಗಳು ಹಾಗೂ ಇತರ ವಾಹನಗಳು ಸಂಚರಿಸುವ ವೇಳೆ ಈ ಮುರಿದು ನೇತಾಡುತ್ತಿರುವ ಕಂಬ ಅನಾಹುತವನ್ನು ಆಹ್ವಾನಿಸುವಂತಿದೆ. ರೈಲ್ವೇ ಅಧಿಕಾರಿಗಳು ತಕ್ಷಣವೇ ಎಚ್ಚೆತ್ತುಕೊಂಡು ಅಪಾಯ ಸಂಭವಿಸುವ ಮುನ್ನವೇ ನೇತಾಡುತ್ತಿರುವ ಕಂಬವನ್ನು ತೆರವುಗೊಳಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.