ಮಂಗಳೂರು, ಮಾ 18(DaijiworldNews/AA): ನಗರದ ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತೋಡಾರ್-ಎಡಪದವು ಚೆಕ್ಪೋಸ್ಟ್ನಲ್ಲಿ ಸೂಕ್ತ ದಾಖಲೆ ಇಲ್ಲದೆ ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ ಲಕ್ಷಾಂತರ ರೂ. ಹಣವನ್ನು ಚುನಾವಣಾಧಿಕಾರಿಗಳ ತಂಡ ಭಾನುವಾರ ವಶಕ್ಕೆ ಪಡೆದಿದೆ.
ದೇಶಾದ್ಯಂತ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಚೆಕ್ಪೋಸ್ಟ್ನಲ್ಲಿ ಚುನಾವಣಾಧಿಕಾರಿಗಳ ತಂಡ ವಾಹನಗಳ ತಪಾಸಣೆ ನಡೆಸುತ್ತಿದೆ. ಭಾನುವಾರ ರಾತ್ರಿ 11ರ ಸುಮಾರಿಗೆ ಕೈಕಂಬ ನಿವಾಸಿಯೊಬ್ಬರು ಕಾರಿನಲ್ಲಿ ಆಗಮಿಸಿದ್ದು, ಅವರ ಕಾರನ್ನು ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಕಾರಿನಲ್ಲಿ ದಾಖಲೆ ಇಲ್ಲದ 1.32 ಲಕ್ಷ ರೂ.ಗಳಿದ್ದು ಈ ಹಣವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಈ ಬಗ್ಗೆ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಸಹಾಯಕ ಚುನಾವಣಾಧಿಕಾರಿ ಕೆ.ಜಾನ್ಸನ್ ಅವರು,’ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ 50 ಸಾವಿರ ರೂ.ಗಳಿಗಿಂತ ಹೆಚ್ಚು ಹಣ ಸಾಗಿಸುವಂತಿಲ್ಲ. ಹೆಚ್ಚು ಹಣ ಸಾಗಿಸುವಾಗ ಸರಿಯಾದ ದಾಖಲೆ ನೀಡಬೇಕು. ಇಲ್ಲದಿದ್ದರೆ ಆ ಹಣವನ್ನು ವಶಪಡಿಸಿಕೊಳ್ಳಲಾಗುವುದು. ಸಂಬಂಧಪಟ್ಟವರು ದಾಖಲೆಯನ್ನು ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಯವರ ಅಪೀಲು ಕಮಿಟಿಗೆ ಮನವಿ ಸಲ್ಲಿಸಿ ಹಣ ವಾಪಾಸ್ ಪಡೆಯಲು ಅವಕಾಶವಿದೆ’ ಎಂದು ತಿಳಿಸಿದ್ದಾರೆ.