ಮಂಗಳೂರು, ಮಾ 18(DaijiworldNews/AA): ಗೋವಾ ರಾಜ್ಯದಿಂದ ಮಂಗಳೂರು ನಗರ ಹಾಗೂ ಕೇರಳಕ್ಕೆ ನಿಷೇದಿತ ಮಾದಕ ವಸ್ತುವಾದ ಕೋಕೇನ್ ನ್ನು ಸಾಗಾಟ/ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಹಾಗೂ 35 ಗ್ರಾಂ ಕೋಕೆನ್ ನ್ನು ಮಂಗಳೂರು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಂಗಳೂರಿನ ಅಂಬ್ಲ ಮೊಗರು, ಸಣ್ಣಮದಕ, ಕೊಳಂಜೆ ಹಿಟ್ಟು ಮನೆ ನಿವಾಸಿ ಸದಕತ್.ಯು ಯಾನೆ ಶಾನ್ ನವಾಜ್(31), ಹಾಗೂ ಮಂಗಳೂರಿನ ಅಂಬ್ಲ ಮೊಗರು, ಮದಕ, ಸೇನರಬೆಟ್ಟು ಮನೆ ನಿವಾಸಿ ಮಹಮ್ಮದ್ ಅಶ್ಫಕ್ ಯಾನೆ ಅಶ್ಫಾ(25) ಬಂಧಿತ ಆರೋಪಿಗಳು.
ಆರೋಪಿಗಳು ಮಂಗಳೂರು ನಗರಕ್ಕೆ ಗೋವಾದಿಂದ ನಿಷೇದಿತ ಮಾದಕ ವಸ್ತುವಾದ ಕೋಕೆನ್ ನ್ನು ಖರೀದಿಸಿ ಮಾರಾಟ ಮಾಡುತ್ತಿದ್ದರು. ಜೊತೆಗೆ ಉಳ್ಳಾಲ ತಾಲೂಕು ಆಂಬ್ಲಮೊಗರು ಗ್ರಾಮದ ಎಲಿಯಾರ್ ಪದವು ಮೈದಾನದ ಬಳಿ ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ ಕೋಕೆನ್ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ.
ದಾಳಿಯಲ್ಲಿ ಆರೋಪಿಗಳಿಬ್ಬರನ್ನು ವಶಕ್ಕೆ ಪಡೆದ ಪೊಲೀಸರು, ಆರೋಪಿಗಳ ವಶದಲ್ಲಿದ್ದ ಹೊಂಡಾ ಅಕ್ಟಿವಾ ಸ್ಕೂಟರ್ ಅನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ಜೊತೆಗೆ ಅದರಲ್ಲಿ ಸಾಗಾಟ ಮಾಡುತ್ತಿದ್ದ 2,72,000 ರೂ. ಮೌಲ್ಯದ 35 ಗ್ರಾಂ ನಿಷೇಧಿತ ಮಾದಕ ವಸ್ತು ಕೋಕೆನ್, 3 ಮೊಬೈಲ್ ಫೋನ್ ಗಳನ್ನು, ಡಿಜಿಟಲ್ ತೂಕ ಮಾಪಕ, ನಗದು ರೂ. 5,560ನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸರು ಆರೋಪಿಗಳಿಂದ ವಶಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ ರೂ. 4,00,000 ಆಗಿರುತ್ತದೆ ಎಂದು ತಿಳಿದುಬಂದಿದೆ. ಇನ್ನು ಈ ಬಗ್ಗೆ ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಗಳು ಅಕ್ರಮ ಲಾಭ ಗಳಿಸುವ ಉದ್ದೇಶದಿಂದ ಗೋವಾದಿಂದ ಕೋಕೆನ್ ಖರೀದಿಸಿ ಕರ್ನಾಟಕ, ಕೇರಳದ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದರು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇನ್ನೂ ಹಲವರು ಭಾಗಿಯಾಗಿದ್ದು, ಆರೋಪಿಗಳ ಪತ್ತೆಗೆ ಶೋಧ ಕಾರ್ಯ ಮುಂದುವರಿದಿದೆ. ಇನ್ನು ಆರೋಪಿಗಳ ಪೈಕಿ ಸದಕತ್.ಯು ಎಂಬಾತನ ವಿರುದ್ದ ಈ ಹಿಂದೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಮಾದಕ ವಸ್ತು ಸಾಗಾಟದ ಪ್ರಕರಣ ಹಾಗೂ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ.
ಮಂಗಳೂರು ಸಿಸಿಬಿ ಇನ್ಸ್ ಪೆಕ್ಟರ್ ಶ್ಯಾಮ್ ಸುಂದರ್ ಹೆಚ್ ಎಂ ನೇತೃತ್ವದ ತಂಡ ಕೋಕೆನ್ ಮಾರಾಟ ಮಾಡುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಿದ್ದು, ಈ ಮಾದಕ ವಸ್ತು ಕೋಕೆನ್ ಮಾರಾಟ ಪತ್ತೆ ಕಾರ್ಯಾಚರಣೆಯಲ್ಲಿ ಪಿಎಸ್ಐಯವರಾದ ಶರಣಪ್ಪ ಭಂಡಾರಿ ಮತ್ತು ಸಿಸಿಬಿ ಸಿಬ್ಬಂದಿಯವರು ಪಾಲ್ಗೊಂಡಿದ್ದರು.