ಉಡುಪಿ, ಮಾ 17(DaijiworldNews/MS): ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ರಾಜಕೀಯ ಪಕ್ಷಗಳು ಸಭೆ ಸಮಾರಂಭ ಸೇರಿದಂತೆ ಮತ್ತಿತರ ಚಟುವಟಿಕೆಗಳನ್ನು ನಡೆಸಲು ಸುವಿಧಾ ತಂತ್ರಾಂಶದ ಮೂಲಕ ಅನುಮತಿ ಪಡೆಯಬೇಕೆಂದ ಜಿಲ್ಲಾ ಚುನಾವಣಾ ಅಧಿಕಾರಿ ಹಾಗೂ ಜಿಲ್ಲಾಧಿಕಾರಿ ವಿದ್ಯಾಕುಮಾರಿ .ಕೆರವರು ತಿಳಿಸಿದರು.
ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಹಾಗೂ ಪ್ರಿಂಟರ್ ಮತ್ತು ಪಬ್ಲಿಷರ್ಸ್ ಗಳ ಮಾಲೀಕರರೂಂದಿಗೆ ಸಭೆ ನಡೆಸಿ ಮಾತನಾಡುತ್ತಿದ್ದರು.
ಜಿಲ್ಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಾಗಿದೆ. ಸಾರ್ವಜನಿಕ ಸಭೆ, ಸಮಾರಂಭ, ರ್ಯಾಲಿ ನಡೆಸಲು, ಸಂಚಾರಿ ವಾಹನ, ಧ್ವನಿವರ್ಧಕ, ಹೆಲಿಕಾಪ್ಟರ್ ಹಾಗೂ ಹೆಲಿಪ್ಯಾಡ್ ಅನುಮತಿ ಸೇರಿದಂತೆ ಇನ್ನಿತರೆ ಕಾರ್ಯ ಚಟುವಟಿಕೆಗಳಿಗೆ ಸುವಿಧಾ ತಂತ್ರಾಂಶ ಮೂಲಕವೇ ಅನುಮತಿ ಪಡೆಯಬೇಕೆಂದರು.
ಲೋಕಸಭೆ ಸಾರ್ವತ್ರಿಕ ಚುನಾವಣಾ ವೇಳಾಪಟ್ಟಿಯಂತೆ ಅಧಿಸೂಚನೆ ಹೊರಡಿಸಲಾಗುವುದು.ಲೋಕಸಭೆ ಚುನಾವಣೆ ಅಂಗವಾಗಿ ಮಾದರಿ ನೀತಿ ಸಂಹಿತೆಯನ್ನು ಚುನಾವಣಾ ಆಯೋಗ ಘೋಷಿಸಿದ್ದು , ಆಯೋಗ ಜಾರಿಗೊಳಿಸಿರುವ ನೀತಿ ಸಂಹಿತೆಗಳನ್ನು ರಾಜಕೀಯ ಪಕ್ಷಗಳು ತಪ್ಪದೇ ಪಾಲಿಸಬೇಕೆಂದರು.ಮಾದರಿ ನೀತಿ ಸಂಹಿತೆ ಜಾರಿಯಾದ ಹಿನ್ನಲೆಯಲ್ಲಿ ತಮ್ಮ ಪಕ್ಷದ ಚಿನ್ನೆಯ ವಾಹನ, ಫ್ಲೆಕ್ಸ್ ಹಾಗೂ ಇನ್ನಿತರೆ ರಾಜಕೀಯ ಸಂಬಂಧ ಬ್ಯಾನರ್ ಗಳಿದ್ದಲ್ಲಿ ಸ್ವಯಂ ಪ್ರೇರಿತವಾಗಿ ತೆರವುಗೊಳಿಸಬೇಕು. ರಾಜಕೀಯ ಪಕ್ಷದವರು ಯಾವುದೇ ಮೆರವಣಿಗೆ ಮಾಡುವುದಕ್ಕೆ, ರಾಜಕೀಯ ಪಕ್ಷಗಳ ಸಭೆ ಸಮಾರಂಭ ಆಯೋಜಿಸುವುದಕ್ಕೆ ಅನುಮತಿ ಪಡೆಯಬೇಕು ಎಂದರು.ಪ್ರಚಾರ ಕಾರ್ಯಕ್ಕೆ ಯಾವುದೇ ಧಾರ್ಮಿಕ ಸಂಸ್ಥೆ, ಸ್ಥಳಗಳನ್ನು ಬಳಸುವಂತಿಲ್ಲ, 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಪ್ರಚಾರ ಕಾರ್ಯಕ್ಕೆ ಬಳಸಿಕೊಳ್ಳಬಾರದು. ಮದುವೆ, ಸಭೆ - ಸಮಾರಂಭಗಳಲ್ಲಿ ಮತ ಪ್ರಚಾರ ಮಾಡುವಂತಿಲ್ಲ ಎಂದು ತಿಳಿಸಿದರು.
ಲೋಕಸಭೆ ಸಾರ್ವತ್ರಿಕ ಚುನಾವಣೆಯನ್ನು ನಿಷ್ಪಕ್ಷಪಾತ, ನ್ಯಾಯಸಮ್ಮತವಾಗಿ ನಡೆಸಲು ಚುನಾವಣೆ ಆಯೋಗದ ನಿರ್ದೇಶನದ ಅನ್ವಯ ಕಾರ್ಯಚಟುವಟಿಕೆಗಳನ್ನು ನಡೆಸಿ ಜಿಲ್ಲಾಡಳಿತಕ್ಕೆ ಯಶಸ್ವಿ ಚುನಾವಣೆ ನಡೆಸಲು ಎಲ್ಲ ಪಕ್ಷದವರು ಸಹಕಾರಿಬೇಕೆಂದರು.ಚುನಾವಣಾ ಆಯೋಗ ಸೂಚಿಸಿರುವ ನಿಯಮಾನುಸಾರ ಚುನಾವಣೆಗೆ ಸಂಬಂಧಿಸಿದ ಕರಪತ್ರವನ್ನು ಮುದ್ರಿಸಿದ ಪ್ರಿಂಟಿಂಗ್ ಪ್ರೆಸ್ ಮಾಲೀಕರು ಡಿಕ್ಲರೇಶನನ್ನು ಮೂರು ದಿನಗಳ ಒಳಗೆ ಜಿಲ್ಲಾ ಎಂ.ಸಿ.ಎಂ.ಸಿ ಸಮಿತಿಗೆ ಕಡ್ಡಾಯವಾಗಿ ಸಲ್ಲಿಸಬೇಕು,ಮುದ್ರಿಸುವ ಕರಪತ್ರದಲ್ಲಿ ಮುದ್ರಕರ ಹೆಸರು, ಮುದ್ರಣದ ಸಂಖ್ಯೆಗಳನ್ನು ತಪ್ಪದೇ ನಮೂದಿಸಬೇಕು. ಮುದ್ರಣಕ್ಕೆ ತಗುಲುವ ವೆಚ್ಚವನ್ನು ಸಹ ನೀಡಬೇಕು. ಕರಪತ್ರದಲ್ಲಿರುವ ವಿಷಯಗಳು ದ್ವೇಷಪೂರಿತವಾಗಿರದೇ, ಇನ್ನೊಬ್ಬರನ್ನು ನಿಂದಿಸುವುದು, ಮಾನಹಾನಿ ಆಗುವುದು , ಸಮಾಜದಲ್ಲಿ ಶಾಂತಿ ಕದಡುವುದು, ಇನ್ನೊಬ್ಬರನ್ನು ಅಪಮಾನಿಸುವುದು, ಯಾವುದೇ ಧರ್ಮವನ್ನು ಹೀಯಾಳಿಸುವುದು ಸೇರಿದಂತೆ ಮತ್ತಿತರ ನಿಯಮಗಳನ್ನುಉಲ್ಲಂಘಿಸದಂತಿರಬೇಕು. ಮಾದರಿ ನೀತಿ ಸಂಹಿತೆ ಉಲ್ಲಂಘಿಸಿ ಕರಪತ್ರಗಳನ್ನು ಮುದ್ರಿಸುವುದು, ಜಾಹೀರಾತುಗಳನ್ನು ಪ್ರಚಾರ ಪಡಿಸುವುದು ಮಾಡಿದ್ದಲ್ಲಿ ಅಂತಹವರ ಮೇಲೆ ಆರ್.ಪಿ ಕಾಯ್ದೆಯಡಿಯಲ್ಲಿ ನಿರ್ದಾಕ್ಷಿಣ್ಯವಾಗಿ ಕಾನೂನಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಸಭೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಕೆ. ಅರುಣ್,ಅಪರ ಜಿಲ್ಲಾಧಿಕಾರಿ ಮಮತಾದೇವಿ ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ .ಬಿ ಶಿಕ್ಷಣಾಧಿಕಾರಿ ಅಶೋಕ್ ಕಾಮತ್. ವಿವಿಧ ರಾಜಕೀಯ ಪಕ್ಷಗಳ ಮುಖಂಡರು , ಪ್ರಿಂಟಿಂಗ್ ಪ್ರೆಸ್ ಮಾಲೀಕರುಮತ್ತು ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು.