ಮಂಗಳೂರು, ಮಾ 17(DaijiworldNews/MS): ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಭಗವಾನ್ ಶ್ರೀರಾಮನ ಪ್ರಾಣಪ್ರತಿಷ್ಠೆ ಬಳಿಕ 48 ದಿನಗಳ ಮಂಡಲೋತ್ಸವ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಪೂರ್ಣಗೊಳಿಸಿದ ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ಕರಾವಳಿಗೆ ವಾಪಸ್ ಆಗಿದ್ದಾರೆ. ಈ ಹಿನ್ನಲೆಯಲ್ಲಿ ಶ್ರೀಗಳನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಶಾಸಕ ವೇದವ್ಯಾಸ್ ಮತ್ತು ಬಿಜೆಪಿ ಹಾಗೂ ವಿಹೆಚ್ಪಿ ಮುಖಂಡರು ಸ್ವಾಗತಿಸಿದರು.
ನಂತರ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್ ಅವರು, ಹಿಂದೂಗಳ ಪಾಲಿನ ಅತ್ಯಂತ ಪವಿತ್ರ ತೀರ್ಥಕ್ಷೇತ್ರವಾದ ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠೆಯ ನಂತರ ಪೇಜಾವರ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ನೇತೃತ್ವದಲ್ಲಿ ಜನವರಿ 30 ರಿಂದ ಮಾರ್ಚ್ 11ವರೆಗೆ ಶ್ರದ್ಧಾಭಕ್ತಿಯಿಂದ ಮಂಡಲ ಪೂಜೆ ನೆರವೇರಿದೆ. ಇದೀಗ ಆ ಪವಿತ್ರ ಕ್ಷೇತ್ರದಿಂದ ಪುಣ್ಯಭೂಮಿ ತುಳುನಾಡಿಗೆ ಆಗಮಿಸಿರುವ ಶ್ರೇಷ್ಠ ಸಂತರನ್ನು ಸ್ವಾಗತಿಸುವ ಸೌಭಾಗ್ಯ ನಮ್ಮೆಲ್ಲರದ್ದು ಎಂದರು.
ಶ್ರೀ ಪೇಜಾವರ ವಿಶ್ವೇಶತೀರ್ಥ ಶ್ರೀಗಳು ಮತ್ತು ದೇಶದ ಬೇರೆ ಭಾಗದ ವಿದ್ಯಾಪೀಠಗಳಲ್ಲಿ ಅಧ್ಯಯನ ಮಾಡಿರುವ ವಿದ್ವಾಂಸರು ಅಯೋಧ್ಯೆ ರಾಮ ಮಂದಿರದಲ್ಲಿ ಮಂಡಲ ಪೂಜೆ ಮಾಡಿದರು. ಮೊದಲ 44 ದಿನ ನಿತ್ಯ ಹೋಮ, ಹವನಗಳ ಜತೆಗೆ ಕಲಾಶಾಭಿಷೇಕ, ಪ್ರತಿಮೆಗೆ ತತ್ವನ್ಯಾಸ ಇತ್ಯಾದಿ ವಿಧಿವಿಧಾನಗಳು ನಡೆದವು. ಪ್ರತಿನಿತ್ಯ ಸಂಜೆ ಉತ್ಸವ ನಡೆಯಿತು. ಕೊನೆಯ ನಾಲ್ಕು ದಿನಗಳ ಕಾಲ ಬ್ರಹ್ಮಕಲಶಾಭಿಷೇಕದ ರೀತಿಯಲ್ಲಿ ಸಹಸ್ರ ಕಲಶಾಭಿಷೇಕ ಜರುಗಿತು. ರಾಮರಾಜ್ಯ ಪರಿಕಲ್ಪನೆಯಡಿ ಜಿಲ್ಲಾಮಟ್ಟದಲ್ಲಿ ಸಮಿತಿಗಳನ್ನು ರಚಿಸಿದ್ದು, ಈ ಅವಧಿಯಲ್ಲಿ ಆ ಸಮಿತಿಗಳು ರಾಮರಾಜ್ಯ ಪರಿಕಲ್ಪನೆಯಡಿ ಕೆಲಸ ಮಾಡಲು ಅಯೋಧ್ಯೆಗೆ ಬಂದು ಸಂಕಲ್ಪ ಮಾಡಿದ್ದರು.
ಇನ್ನೊಂದೆಡೆ ಅಯೋಧ್ಯೆಯಲ್ಲಿ ರಾಮನ ಪ್ರಾಣ ಪ್ರತಿಷ್ಠಾಪನೆಯಾದ ಬಳಿಕ ನಡೆಯಲಿರುವ ಮೊದಲ ರಾಮನವಮಿಗೆ ಮಂದಿರದಲ್ಲಿ ಭರದಿಂದ ಸಿದ್ಧತೆ ನಡೆಸಲಾಗುತ್ತಿದೆ.