ಮಂಗಳೂರು, ಮಾ 17(DaijiworldNews/MS): ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಪದ್ಮರಾಜ್ ರಾಮಯ್ಯ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸುವುದು ಬಹುತೇಕ ಖಚಿತವಾಗಿದೆ. ರಾಜ್ಯದಿಂದ ದ.ಕ. ಕ್ಷೇತ್ರಕ್ಕೆ ಎರಡು ಹೆಸರುಗಳು ಎಐಸಿಸಿ ಯ ಚುನಾವಣಾ ಸಮಿತಿ ಹೋಗಿದ್ದು , ಬಹುತೇಕ ಸೋಮವಾರ ಅಂತಿಮಗೊಳ್ಳುವ ನಿರೀಕ್ಷೆ ಇದೆ. ಜನಾರ್ದನ ಪೂಜಾರಿಯವರು ಸೋತ ಬಳಿಕ ಗೆಲ್ಲಲಾಗದ ಕ್ಷೇತ್ರವನ್ನು ಪೂಜಾರಿಯವರ ಶಿಷ್ಯನ ಮೂಲಕ ಗೆದ್ದು ಕೈವಶ ಮಾಡಿಕೊಳ್ಳಬೇಕು ಎಂಬ ಆಲೋಚನೆಯಲ್ಲಿರುವ ಕಾಂಗ್ರೆಸ್ ಪಕ್ಷ ಪದ್ಮರಾಜ್ ಅವರನ್ನೇ ಕಣಕ್ಕಿಳಿಸಲು ಮುಂದಾಗಿದೆ.
ಲೋಕಸಭೆಗೆ ಅಭ್ಯರ್ಥಿಗಳ ಆಯ್ಕೆ ಸಂಬಂಧ ಕಾಂಗ್ರೆಸ್ ವೀಕ್ಷಕರು ಕೊಟ್ಟ ವರದಿಯ ಅನುಸಾರ ಕೆಪಿಸಿಸಿಯಿಂದ ಕಾಂಗ್ರೆಸ್ ಹೈಕಮಾಂಡ್ ಗೆ ರವಾನೆಯಾದ ಪಟ್ಟಿಯಲ್ಲಿ ಪದ್ಮರಾಜ್ ರಾಮಯ್ಯ ಮತ್ತು ವಿನಯ್ ಕುಮಾರ್ ಸೊರಕೆ ಅವರ ಹೆಸರಿತ್ತು. ಈ ಬಗ್ಗೆ ಕಾಂಗ್ರೆಸ್ ಕೇಂದ್ರ ಚುನಾವಣಾ ಸಮಿತಿಯಲ್ಲಿ ಚರ್ಚೆ ನಡೆದಿದ್ದು, ಅಂತಿಮವಾಗಿ ಪದ್ಮರಾಜ್ ರಾಮಯ್ಯ ಅವರನ್ನು ಕಣಕ್ಕಿಳಿಸಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.
ಕುದ್ರೋಳಿ ಗೋಕರ್ಣನಾಥ ದೇವಸ್ಥಾನದ ಖಜಾಂಚಿಯಾಗಿ ಬಿಲ್ಲವ ಸಂಘಸಂಸ್ಥೆಗಳಲ್ಲಿ ಸಕ್ರೀಯರಾಗಿರುವ ಪದ್ಮರಾಜ್ ಕಾಂಗ್ರೆಸ್ ಅಭ್ಯರ್ಥಿಯಾದರೆ ಬಿಜೆಪಿಯ ಮತಬ್ಯಾಂಕ್ ಆಗಿರುವ ಬಿಲ್ಲವರು ಮತ್ತು ಆರ್ಥಿಕವಾಗಿ ಹಿಂದುಳಿದವರ ಮತಗಳು ಕಾಂಗ್ರೆಸ್ ಕಡೆ ವಾಲುವ ಸಾಧ್ಯತೆ ಇದೆ. ದಕ್ಷಿಣ ಕನ್ನಡದಲ್ಲಿ ಬಿಜೆಪಿಯನ್ನು ಸೋಲಿಸಲು ಪದ್ಮರಾಜ್ ಉತ್ತಮ ಆಯ್ಕೆ ಎಂದು ಮನಗಂಡಿರುವ ಹೈಕಮಾಂಡ್ ನಾಯಕರು, ದಕ್ಷಿಣ ಕನ್ನಡ ಜಿಲ್ಲೆಯ ದೀರ್ಘಾವಧಿಯ ರಾಜಕಾರಣವನ್ನು ಗಮನದಲ್ಲಿಟ್ಟುಕೊಂಡು ಪದ್ಮರಾಜ್ ಅವರನ್ನು ಕಣಕ್ಕಿಳಿಸಲು ತೀರ್ಮಾನಿಸಿದ್ದಾರೆ ಎಂದು ತಿಳಿದುಬಂದಿದೆ.
ಬಿಜೆಪಿಯ ಅಭ್ಯರ್ಥಿ ಬೃಜೇಶ್ ಚೌಟ ಮತ್ತು ಕಾಂಗ್ರೆಸ್ ನಲ್ಲಿ ಟಿಕೆಟ್ ಸಿಗುವ ನಿರೀಕ್ಷೆಯಲ್ಲಿರುವ ಪದ್ಮರಾಜ್ ರಾಮಯ್ಯ ಇಬ್ಬರೂ ಕೂಡಾ ಹೊಸ ಮುಖದ ಅಭ್ಯರ್ಥಿಗಳೇ ಆಗಿದ್ದು, ಪ್ರತಿಷ್ಟೆಯ ಅಖಾಡವಾಗಿ ಮಾರ್ಪಾಡಾಗಲಿದೆ.