ಕುಂದಾಪುರ, ಮಾ 17(DaijiworldNews/MS): ಭಕ್ತಿಯೋಗದ ಮೂಲಕ ಸುಲಭವಾಗಿ ಭಗವಂತನ ಅನುಗ್ರಹಕ್ಕೆ ಪಾತ್ರರಾಗಲು ಸಾಧ್ಯವಿದೆ. ಭಜನೆ, ಧ್ಯಾನ ಇವೇ ಮೊದಲಾದ ಸುಲಭ ಮಾರ್ಗಗಳ ಅನುಸರಿಸಿ ಭಗವದ್ಭಕ್ತರು ಶ್ರೀರಾಮನ ಕೃಪೆಗೆ ಪಾತ್ರರಾಗಬಹುದು. ಭಕ್ತಿಯೋಗದಿಂದ ಮನಸ್ಸಿನ ಭಾರ ದೂರವಾಗುತ್ತದೆ. ಕಷ್ಟದ ಭಾರ ಕಡಿಮೆಯಾಗುತ್ತದೆ. ದುಃಖವು ಕ್ಷಿಣಿಸುತ್ತದೆ. ಮನಸ್ಸಿನ ನಿಯಂತ್ರಣ ಸಾಧ್ಯವಾಗುತ್ತದೆ. ಭಕ್ತಿಗೆ ಇರುವ ಶಕ್ತಿ ಅಸಾಧಾರಣವಾದುದು ಎಂದು ಶ್ರೀರಾಮ ಕ್ಷೇತ್ರ ಮಹಾ ಸಂಸ್ಥಾನಂ ಧರ್ಮಸ್ಥಳ ಇಲ್ಲಿನ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ಪಡುಕೋಣೆ ಶ್ರೀರಾಮ ದೇವಸ್ಥಾನದಲ್ಲಿ ನಡೆದ ಸೀತಾರಾಮ ಕಲ್ಯಾಣೋತ್ಸವ ಕಾರ್ಯಕ್ರಮದಲ್ಲಿ ಅವರು ಆಶಿರ್ವಚನ ನೀಡಿದರು.
ಶ್ರದ್ಧಾಕೇಂದ್ರಗಳು ಭಕ್ತಿಯನ್ನು ಉದ್ದೀಪನಾಗೊಳಿಸುತ್ತವೆ. ಭಗವಂತನಿಗೆ ಯಾವುದೇ ಜಾತಿ, ಮತ, ಲಿಂಗಬೇಧವಿಲ್ಲ. ಆತನ ದೃಷ್ಟಿಯಲ್ಲಿ ಎಲ್ಲರೂ ಸಮಾನರು. ಸಂವಿಧಾನದಲ್ಲಿ ಉಲ್ಲೇಖಿಸಲ್ಪಟ್ಟಂತೆ ನಾವೆಲ್ಲರೂ ಸಮಾನತೆಯಿಂದ ಬಾಳಬೇಕು ಎಂದರು.
ರಾಮನ ನಾಮ ನೆನೆಯುವುದರಿಂದ ಕಷ್ಟಗಳು ದೂರಾಗುತ್ತವೆ. ಭಕ್ತಿಯಿಂದ ಭಗವಂತನ ನೆನೆಪಿಸಿಕೊಂಡಾಗ ಮನಸ್ಸು, ಶರೀರಕ್ಕೆ ವಿಶೇಷ ಶಕ್ತಿ ಬರುತ್ತದೆ. ಭಕ್ತಿಯಲ್ಲಿ ಇರುವ ಶಕ್ತಿ ಅಗಾಧವಾದುದು ಎಂದು ಹೇಳಿದ ಅವರು ಅಯೋಧ್ಯೆಯಲ್ಲಿ ನಮ್ಮ ಮಠದ ಶಾಖಾ ಮಠ ತೆರೆಯುವ ನಿಟ್ಟಿನಲ್ಲಿ ಕಾರ್ಯಪ್ರವೃತರಾಗಿದ್ದೇವೆ. ಇವತ್ತು ಅಯೋಧ್ಯೆ ಸ್ವರ್ಗದಂತೆ ರಾರಾಜಿಸುತ್ತಿದೆ. ಶ್ರೀರಾಮ ಸರ್ವರಿಗೂ ಶುಭವನ್ನುಂಟು ಮಾಡಲಿ ಎಂದರು.
ಶ್ರೀರಾಮ ಕ್ಷೇತ್ರ ಮಹಾ ಸಂಸ್ಥಾನಂ ಧರ್ಮಸ್ಥಳ ಇಲ್ಲಿನ ಆಸ್ಥಾನ ಪುರೋಹಿತರಾದ ವೇ.ಮೂ.ಶ್ರೀ ಲಕ್ಷ್ಮೀಪತಿ ಗೋವಿಂದಾಚಾರ್ಯ ಅವರ ನೇತೃತ್ವದಲ್ಲಿ ಬೆಳಿಗ್ಗೆ 9.30ಕ್ಕೆ ಲೋಕ ಕಲ್ಯಾಣಾರ್ಥವಾಗಿ ಸೀತಾರಾಮ ಕಲ್ಯಾಣೋತ್ಸವ ನಡೆಯಿತು. ಗುರುವಂದನಾ ಕಾರ್ಯಕ್ರಮ, ಮಧ್ಯಾಹ್ನ 1 ಗಂಟೆಗೆ ಮಹಾ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 7 ಗಂಟೆಗೆ ಕುಣಿತ ಭಜನಾ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಶ್ರೀರಾಮ ದೇವಸ್ಥಾನ ಪಡುಕೋಣೆ ಇದರ ಅಧ್ಯಕ್ಷರಾದ ರಾಮ ಪೂಜಾರಿ ಮುಲ್ಲಿಮನೆ, ಕಾರ್ಯದರ್ಶಿ ಕೆ.ರಾಮಚಂದ್ರ ಹೆಬ್ಬಾರ್, ಸೀತಾರಾಮ ಕಲ್ಯಾಣೋತ್ಸವ ಸಮಿತಿ ಅಧ್ಯಕ್ಷರಾದ ಅರವಿಂದ ಪೂಜಾರಿ, ಕಾರ್ಯದರ್ಶಿ ಕಿರಣ್ ಗಾಣಿಗ ಮೊದಲಾದವರು ಉಪಸ್ತಿತರಿದ್ದರು.