ಸುಬ್ರಹ್ಮಣ್ಯ, ಎ30(Daijiworld News/SS): ಇತಿಹಾಸ ಪ್ರಸಿದ್ಧ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸರ್ಕಾರದ ಅನುಮೋದನೆ ಪಡೆದು 77 ಕೋಟಿ ರೂ. ವೆಚ್ಚದಲ್ಲಿ ಚಿನ್ನದ ರಥ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲು ಆಡಳಿತ ಮಂಡಳಿ ನಿರ್ಧರಿಸಿದೆ.
ರಥ ನಿರ್ಮಾಣಕ್ಕೆ ದೇವಳದ ನಿಧಿಯ ಜತೆಗೆ, ಭಕ್ತರು ಹಾಗೂ ದಾನಿಗಳಿಂದ ಕಾಣಿಕೆ ರೂಪದ ದೇಣಿಗೆ ಸಂಗ್ರಹಿಸಲಾಗುವುದು. ಚಿನ್ನದ ರಥವನ್ನು ಆರು ತಿಂಗಳೊಳಗೆ ನಿರ್ವಿುಸುವ ಉದ್ದೇಶವಿದೆ ಎಂದು ತಿಳಿಸಿದ್ದಾರೆ.
ಇದಕ್ಕಾಗಿ ಭಕ್ತಾದಿಗಳು ಚಿನ್ನ ಹಾಗೂ ದೇಣಿಗೆಯನ್ನು ದೇವಳಕ್ಕೆ ಕಾಣಿಕೆ ರೂಪದಲ್ಲಿ ನೀಡಬಹುದು. ಭಕ್ತರು ಚಿನ್ನ ಅಥವಾ ಹಣದ ರೂಪದಲ್ಲಿ ಕಾಣಿಕೆ ಸಲ್ಲಿಸಬಹುದು. ಇದಕ್ಕಾಗಿ ಪ್ರತ್ಯೇಕ ಚಿನ್ನದ ರಥದ ಖಾತೆಯನ್ನು ದೇವಳದಿಂದ ತೆರೆಯಲಾಗಿದೆ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಹೆಸರಾಂತ ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ನೂತನವಾಗಿ ಚಿನ್ನದ ರಥ ನಿರ್ಮಿಸಿ, ಅರ್ಪಿಸುವ ಕುರಿತಂತೆ ವಿವಾದಗಳು ಕೇಳಿ ಬರುತ್ತಿದ್ದು. ಈ ಕುರಿತು ಸಿಎಂ ಸ್ಪಷ್ಟನೆ ನೀಡಿದ್ದಾರೆ.
ಸುಬ್ರಹ್ಮಣ್ಯ ದೇವಾಲಯಕ್ಕೆ ನೂತನವಾಗಿ ಚಿನ್ನದ ರಥ ನಿರ್ಮಿಸಿ, ಅರ್ಪಿಸುವ ಪ್ರಸ್ತಾವನೆಗೆ 2005ರಲ್ಲೇ ರಾಜ್ಯ ಸರ್ಕಾರ ಅನುಮೋದನೆ ನೀಡಿತ್ತು. ಅದನ್ನು 15 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿತ್ತು. ಈ ಉದ್ದೇಶಕ್ಕೆ ದೇವಾಲಯದಲ್ಲಿ ಲಭ್ಯವಿರುವ ಚಿನ್ನ ಬಳಸಿಕೊಳ್ಳಲು ಮತ್ತು ಉಳಿದ ಚಿನ್ನವನ್ನು ಬ್ಯಾಂಕಿನ ಮೂಲಕ ಖರೀದಿಸಲು ಸರಕಾರ ಅನುಮೋದನೆ ನೀಡಿತ್ತು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ರಥ ನಿರ್ಮಾಣಕ್ಕೆ ಸರಕಾರದ ಅನುದಾನ ಬಳಸದೆ, ಸಾರ್ವಜನಿಕರ ದೇಣಿಗೆ ಸಂಗ್ರಹ ಹಾಗೂ ದೇವಾಲಯದ ಸಂಪನ್ಮೂಲಗಳಿಂದಲೇ ವೆಚ್ಚ ಭರಿಸುವಂತೆ ಸರಕಾರಿ ಆದೇಶದಲ್ಲಿ ಸೂಚಿಸಲಾಗಿತ್ತು. ಇತ್ತೀಚೆಗೆ ಶ್ರೀಕ್ಷೇತ್ರದ ಭಕ್ತರು ಭೇಟಿ ಮಾಡಿದಾಗ ಈ ಯೋಜನೆಯನ್ನು ಪುನರಾರಂಭಿಸುವಂತೆ ಮನವಿ ಮಾಡಿದ್ದರು. ಈ ಮನವಿ ಆಧರಿಸಿ ಸದ್ಯದ ಮಾರುಕಟ್ಟೆ ದರದಲ್ಲಿ ಚಿನ್ನದ ಬೆಲೆ ಹಾಗೂ ನಿರ್ಮಾಣ ವೆಚ್ಚದ ಅಂದಾಜು ಪರಿಷ್ಕರಿಸಿ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾವನೆ ಮಂಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ವಿಚಾರದಲ್ಲಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವಂತೆ ಬೇರೆ ಯಾವುದೇ ಉದ್ದೇಶ ಇಲ್ಲ ಎಂದು ಸಿಎಂ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.