ಉಡುಪಿ ,ಮಾ 15(DaijiworldNews/AK): ರಾಜ್ಯ ಸರಕಾರದ ಸುಪರ್ದಿಯಲ್ಲಿರುವ ಕರ್ನಾಟಕ ಸರಕಾರ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಸರಕಾರ ಮತ್ತೆ ಖಾಸಗೀಕರಣ ಮಾಡುವ ಪ್ರಯತ್ನ ನಡೆಸುತ್ತಿರುವ ಬಗ್ಗೆ ವರದಿಗಳಿದ್ದು, ಒಂದು ವೇಳೆ ಸರಕಾರ ಇದಕ್ಕೆ ಮುಂದಾದರೆ ಕಾನೂನು ಹೋರಾಟವೂ ಸೇರಿದಂತೆ ಉಡುಪಿಯ ಸಾರ್ವಜನಿಕರೊಂದಿಗೆ ಸೇರಿ ರಸ್ತೆಗೆ ಇಳಿದು ಹೋರಾಟ ಮಾಡಲು ಹಿಂಜರಿಯುವುದಿಲ್ಲ ಎಂದು ಹಾಜಿ ಅಬ್ದುಲ್ಲಾ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ, ಖ್ಯಾತ ಮನೋರೋಗ ತಜ್ಞ ಡಾ.ಪಿ.ವಿ.ಭಂಡಾರಿ ಎಚ್ಚರಿಸಿದ್ದಾರೆ.
ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಡಾ.ಭಂಡಾರಿ, ಬಡವರ ಆಸ್ಪತ್ರೆ ಎಂದೇ ಕರೆಯಲಾಗುವ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಪಿಪಿಪಿ ಮಾದರಿಯಲ್ಲಿ ಖಾಸಗಿಯವರಿಗೆ ನೀಡುವುದನ್ನು ಹಾಜಿ ಅಬ್ದುಲ್ಲಾ ಟ್ರಸ್ಟ್ ಒಪ್ಪುವುದಿಲ್ಲ.ಉಡುಪಿಯ ಕೊಡುಗೈ ದಾನಿ ಎನಿಸಿದ ಖಾನ್ ಬಹಾದ್ದೂರ್ ಹಾಜಿ ಅಬ್ದುಲ್ಲಾ ಇವರು ಸಮಾಜದ ಬಡವರು ಹಾಗೂ ಹಿಂದುಳಿದವರಿಗಾಗಿ ತಾನೇ ದಾನವಾಗಿತ್ತ ಜಾಗದಲ್ಲಿ ಕಟ್ಟಿದ ಆಸ್ಪತ್ರೆ. ದಾನಿಗಳ ಆಶಯದಂತೆ ಉತ್ತಮವಾಗಿ ನಡೆಯುತ್ತಿದ್ದ ಹಾಜಿ ಅಬ್ದುಲ್ಲಾ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಆಧುನೀಕರಿಸುವ ನೆಪದಲ್ಲಿ ಖಾಸಗಿಯವರಿಗೆ ಒಪ್ಪಿಸಿದಾಗ ಉಡುಪಿಯ ಜನತೆಯೊಂದಿಗೆ ಸೇರಿ ಟ್ರಸ್ಟ್ ಕಾನೂನಾತ್ಮಕ ಹೋರಾಟ ನಡೆಸಿತ್ತು.
ಇದೀಗ ಡಾ.ಬಿ.ಆರ್.ಶೆಟ್ಟಿ ಅವರಿಗೆ ಆಸ್ಪತ್ರೆಯನ್ನು ನಡೆಸಲು ಸಾಧ್ಯವಾಗದೇ ಮತ್ತೆ ಅದು ಸರಕಾರದ ಸುಪರ್ದಿಗೆ ಬಂದಿದೆ. ಇದೀಗ ಮತ್ತೆ ಈ ಆಸ್ಪತ್ರೆಯನ್ನು ಪಿಪಿಪಿ ಮಾದರಿಯಲ್ಲಿ ಮುನ್ನಡೆಸಲು ಸರಕಾರ ಚಿಂತನೆ ನಡೆಸುತ್ತಿದೆ. ಇದರ ಬದಲು ಸರ್ಕಾರ ತನ್ನ ಹತ್ತಿರ ಇರುವ ಮೂಲ ಭೂತ ಸೌಕರ್ಯವನ್ನು ಉಪಯೋಗಿ. ಪೂರ್ಣ ಸರ್ಕಾರಿ ವೈದ್ಯಕೀಯ ಕಾಲೇಜು ಮಾಡಿದಲ್ಲಿ ಜನ ಸಾಮಾನ್ಯರ ಆರೋಗ್ಯ ಕಾಪಾಡುವ ಸರ್ಕಾರದ ಆದ್ಯತೆ ಸ್ವಲ್ಪ ಮಟ್ಟಿಗಾದರೂ ನೆರೆವೇರುತ್ತದೆ. ಸರಕಾರೀ ವೈದ್ಯಕೀಯ ಕಾಲೇಜು ಬಂದರೆ 150 ವೈದ್ಯಕೀಯ ಸೀಟುಗಳು ಸರ್ಕಾರದ ಸುಪರ್ದಿಗೆ ಸೇರಿರುತ್ತದೆ. ಜಿಲ್ಲೆಯ ಪ್ರತಿಭಾವಂತ ಬಡ ಮಕ್ಕಳು ನೀಟ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದಲ್ಲಿ ಇಲ್ಲೇ ಸೀಟ್ ಸಿಗುವ ಸಂಭವ ಹಾಗು ಸರ್ಕಾರಿ ಶುಲ್ಕ ಅಂದರೆ ವರ್ಷಕ್ಕೆ ರೂಪಾಯಿ 59000ರಲ್ಲಿ ವೈದ್ಯಕೀಯ ಶಿಕ್ಷಣ ದೊರೆಯುತ್ತದೆ.
ಪಿ.ಪಿ.ಪಿ. ಮಾದರಿಯಲ್ಲಿ ವೈದ್ಯಕೀಯ ಕಾಲೇಜು ಮಾಡುವುದರಿಂದ ವಿದ್ಯಾರ್ಥಿಗಳಿಗೆ ಯಾವುದೇ ಲಾಭವಿಲ್ಲ, ಹಾಗೆಯೇ ಪೂರ್ಣ ಪ್ರಮಾಣದ ಸರ್ಕಾರಿ ಕಾಲೇಜು ಬಂದಲ್ಲಿ ನಮ್ಮ ಜಿಲ್ಲಾ ಆಸ್ಪತ್ರೆಯ ಮೇಲ್ದರ್ಜಿ ಕಾರಣ ಹಾಗೂ ಮಾನವ ಸಂಪನ್ಮೂಲದಲ್ಲಿ ಇರುವ ಕೊರತೆ ಕೂಡ ತನ್ನಷ್ಟಕ್ಕೆ ಸರಿಯಾಗುತ್ತದೆ.
ಇದೆಲ್ಲವನ್ನು ಮನಗೊಂಡು ಹಾಜಿ ಅಬ್ದುಲ್ಲಾ ಚಾರಿಟೇಬಲ್ ಟ್ರಸ್ಟ್, ಕೂಸಮ್ಮ ಶಂಭು ಶೆಟ್ಟಿ ಹಾಜಿ ಅಬ್ದುಲ್ಲಾ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಸರ್ಕಾರ ಮತ್ತೊಮ್ಮೆ ಖಾಸಗಿಯವರಿಗೆ ನೀಡುವ ನಿರ್ಧಾರ ಮಾಡಿದಲ್ಲಿ ಇದನ್ನು ಕಾನೂನಾತ್ಮಕವಾಗಿ ಪ್ರಶ್ನಿಸುತ್ತದೆ ಹಾಗೂ ಉಡುಪಿ ಜಿಲ್ಲೆಯ ನಾಗರಿಕರೊಂದಿಗೆ ರಸ್ತೆಗೆ ಇಳಿದು ಹೋರಾಟವನ್ನು ಮಾಡಲು ಹಿಂಜರಿಯುವುದಿಲ್ಲ ಎಂಬ ಸೂಚನೆಯನ್ನು ಸರ್ಕಾರಕ್ಕೆ ನೀಡುತ್ತೇವೆ ಎಂದರು.