ಕಾರ್ಕಳ, ಮಾ 15(DaijiworldNews/AK): ಮಂಗಳೂರಿನ ಅಡ್ಡೂರು ಫಲ್ಗಣಿ ನದಿಯ ಸರಕಾರಿಯ ಜಾಗದಿಂದ ಕಾರ್ಕಳಕ್ಕೆ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ದಂಧೆಕೋರರ ವಿರುದ್ಧ ಕಾರ್ಕಳ ನಗರ ಠಾಣಾಧಿಕಾರಿ ಧನಂಜಯ ನೇತೃತ್ವದ ಪೊಲೀಸರ ತಂಡವು ಕಾನೂನು ಕ್ರಮ ಕೈಗೊಂಡಿದೆ.
ಆರೋಪಿ ಸಂದೀಪ ಎಂಬಾತನು ಯಾವುದೇ ಪರವಾನಿಗೆ ಇಲ್ಲದೇ ಮಂಗಳೂರಿನ ಅಡ್ಡೂರು ಫಲ್ಗುಣಿ ನದಿಯ ಸರಕಾರಿ ಸ್ಥಳದಿಂದ ಅಡ್ಡೂರಿನ ಅಬ್ಬುಲ್ ಸತ್ತಾರ್ ಹಾಗೂ ಕಾರ್ಕಳದ ಪುಲ್ಕೇರಿ ರಾಜೇಶ ಎಂಬುವರೊಂದಿಗೆ ಸೇರಿಕೊಂಡು ಅಕ್ರಮವಾಗಿ ಮರಳನ್ನು ಕಳವು ಮಾಡಿ ಕಾರ್ಕಳ ಕಡೆಗೆ ಸಾಗಿಸುತ್ತಿದ್ದರು.
ಕೆಎ 19 ಎಡಿ 9426 ನಂಬ್ರದ ಟಿಪ್ಪರ್ ಲಾರಿಗೆ ಮರಳು ಲೋಡ್ ಮಾಡಿಕೊಂಡು ಮಂಗಳೂರಿನ ಅಡ್ಡೂರಿನಿಂದ ಪುಲ್ಕೇರಿ ಜಂಕ್ಷನ್ ಕಡೆಯಾಗಿ ಬಂಗ್ಲೆಗುಡ್ಡೆ ಜಂಕ್ಷನ್ ಕಡೆಗೆ ಸಾಗಾಟ ಮಾಡಲಾಗುತ್ತಿತ್ತು. ಈ ನಡುವೆ ಕಾರ್ಕಳ ಕಸಬಾ ಗ್ರಾಮದ ಕಾಬೆಟ್ಟು ವೇಣುಗೋಪಾಲ ದೇವಸ್ಥಾನದ ಜಂಕ್ಷನ್ ಬಳಿ ಕಾರ್ಕಳ ನಗರ ಠಾಣಾ ಪಿಎಸ್ಐ ಧನಂಜಯ ಬಿ ಸಿ ರವರು ಸಿಬ್ಬಂದಿಯರು ತಡೆದು ನಿಲ್ಲಿಸಿ ಟಿಪ್ಪರ್ ಲಾರಿಯನ್ನು ಸ್ವಾದೀನ ಪಡೆದಿದ್ದಾರೆ.
ಮಾರ್ಚ್ 15ರ ಬೆಳಿಗ್ಗೆ 10.30 ಗಂಟೆಗೆ ಪೊಲೀಸರು ಕಾರ್ಯಚರಣೆ ನಡೆಸಿದ್ದು, 3 ಯುನಿಟ್ ಮರಳು ಒಟ್ಟು ಅಂದಾಜು ರೂ. ಮೌಲ್ಯ 15000 ಹಾಗೂ ಟಿಪ್ಪರ್ ಲಾರಿಯ ಮೌಲ್ಯ ರೂ.10 ಲಕ್ಷ ರೂ ಆಗಿರುತ್ತದೆ ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.