ಕಾರ್ಕಳ , ಮಾ 14(DaijiworldNews/AK): 1981 ಎಪ್ರಿಲ್ 8ರಂದು ನಡೆದ ಪ್ರಕರಣದಲ್ಲಿ ಭಾಗಿಯಾಗಿ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೇ ತಲೆ ಮರೆಸಿಕೊಂಡಿದ್ದ ಆರೋಪಿಯ ಪತ್ತೆಗೆ ಪಡುಬಿದ್ರಿ ಪೊಲೀಸರು ಪ್ರಯತ್ನ ನಡೆದಿದ್ದು, ಆರೋಪಿಯು 30 ವರ್ಷಗಳ ಹಿಂದೆ ಅನಾರೋಗ್ಯಕ್ಕೆ ತುತ್ತಾಗಿ ಸಾವಿಗೀಡಾಗಿದ್ದನೆಂಬ ಅಶ್ವರ್ಯಕರ ಮಾಹಿತಿ ಬೆಳಕಿಗೆ ಬಂದಿದೆ.
ಘಟನೆಯ ವಿವರ:
1981 ಎಪ್ರಿಲ್ 8ರಂದು ಈ ಘಟನೆಯ ನಡೆದಿತ್ತು.ಕಾರ್ಕಳ ತಾಲೂಕು ಬೆಳ್ಮಣ್ಣು ಗ್ರಾಮದ ವಿಶ್ವನಾಥ, ಬಾಬು, ದಿವಾಕರ, ಜಗ್ಗು ಹಾಗು ಮಂಜರಪಲ್ಕೆಯ ಸುಧಾಕರ ಶೆಟ್ಟಿ ಎಂಬವರು ಸರಕಾರಿ ಜಾಗದಿಂದ ಯಾವುದೇ ಪರವಾನಿಗೆ ಇಲ್ಲದೆ ಮರಗಳನ್ನು ಕಡಿದು ಲಾರಿಯಲ್ಲಿ ಸಾಗಾಟ ಮಾಡುತ್ತಿದ್ದಾಗ ಮಂಗಳೂರು ವಿಶೇಷ ಅರಣ್ಯ ದಳದ ಅಧಿಕಾರಿ ಹಾಗು ಸಿಬ್ಬಂದಿಯವರು ನಂದಿಕೂರು ಪೇಟೆಯಲ್ಲಿ ಲಾರಿ ಸಮೇತ ಆರೋಪಿಗಳನ್ನು ದಸ್ತಗಿರಿ ಮಾಡಿ ಶಿರ್ವ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದರು.
ಬಳಿಕ ಆರೋಪಿಗಳ ವಿರುದ್ಧ ಅರಣ್ಯ ಕಾಯಿದೆ ಹಾಗು ಕಳವು ಪ್ರಕರಣ ದಾಖಲಾಗಿ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.ಪ್ರಕರಣದ ಕಡತವು ಪಡುಬಿದ್ರಿ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡು ಆರೋಪಿಗಳು ನ್ಯಾಯಾಲಯದಿಂದ ಜಾಮೀನು ಪಡೆದಿರುತ್ತಾರೆ.
ಆರೋಪಿಗಳಲ್ಲಿ ಒಬ್ಬನಾದ ಸುಧಾಕರ ಶೆಟ್ಟಿ ನ್ಯಾಯಾಲಯದ ವಿಚಾರಣೆ ಸಮಯ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದನು.ನ್ಯಾಯಾಲಯಕ್ಕೆ ಹಾಜರಾಗದ ಕಾರಣ ಕಾರ್ಕಳ ಪಿ ಸಿ ಜೆ ಮತ್ತು ಜೆ ಎಮ್ ಎಫ್ ಸಿ ನ್ಯಾಯಾಲಯವು ಆರೋಪಿ ಸುಧಾಕರ ಶೆಟ್ಟಿ, ಮಂಜರಪಲ್ಕೆ ಈತನ ವಿರುದ್ಧ ಎಲ್ ಪಿ ಸಿ (Long Pending Case) ಪ್ರಕರಣ ದಾಖಲಿಸಿ ದಸ್ತಗಿರಿ ಬಗ್ಗೆ ವಾರಂಟ್ ಹೊರಡಿಸಿರುತ್ತದೆ.
ಪಡುಬಿದ್ರಿ ಪೊಲೀಸ್ ಠಾಣೆಯ ಪಿ ಎಸ್ ಐ ಪ್ರಸನ್ನ ಎಮ್ ಎಸ್ ರವರ ನಿರ್ದೇಶನದಂತೆ ಎ ಎಸ್ ಐ ರಾಜೇಶ್ ಪಿ ರವರು ವಾರಂಟ್ ಆಸಾಮಿ ಸುಧಾಕರ ಶೆಟ್ಟಿ ರವರ ಬಗ್ಗೆ ವಿಳಾಸದಲ್ಲಿ ವಿಚಾರಿಸಿದ್ದಾರೆ.ಆರೋಪಿ ಸುಧಾಕರ ಶೆಟ್ಟಿ ಅಸಾಮಿಯು 1994 ಮಾಚ್೯ 29 ರಂದು ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಖಾಯಿಲೆ ಬಗ್ಗೆ ದಾಖಲಾಗಿ ಚಿಕಿತ್ಸೆಯಲ್ಲಿರು ಇರುವಾಗಲೇ ಮೃತಪಟ್ಟಿದ್ದನು. ಈ ಬಗ್ಗೆ ಮಾಹಿತಿ ಸಂಗ್ರಹಿಸಿದ ಪಡುಬಿದ್ರಿ ಪೊಲೀರು, ಕಾರ್ಕಳ ಪುರಸಭೆಯಿಂದ ಮರಣದ ದೃಢಪತ್ರವನ್ನು ಪಡೆದು ನ್ಯಾಯಾಲಯಕ್ಕೆ ನಿವೇದಿಸಿಕೊಂಡ ಮೇರೆಗೆ ನ್ಯಾಯಾಲಯವು ಪ್ರಕರಣವನ್ನು ಮುಕ್ತಾಯ ಗೊಳಿಸಿರುತ್ತದೆ.