ಮಂಗಳೂರು, ಮಾ 14(DaijiworldNews/MS): ಭೂಸೇನೆಯಲ್ಲಿ ಕ್ಯಾಪ್ಟನ್ ಆಗಿ ಸ್ವಯಂನಿವೃತ್ತಿ ಪಡೆದುಕೊಂಡಿದ್ದ ಕ್ಯಾ. ಬ್ರಿಜೇಶ್ ಚೌಟ ಈಗ ಬಿಜೆಪಿ ಭದ್ರಕೋಟೆ ಎಂದೇ ಹೇಳಲಾಗುವ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿದ್ದಾರೆ. ಬಿಜೆಪಿ ರಾಜ್ಯ ಕಾರ್ಯದರ್ಶಿಯೂ ಆಗಿರುವ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರಿಗೆ ಬಿಜೆಪಿ ಹೈಕಮಾಂಡ್ ಟಿಕೆಟ್ ನೀಡಿದ್ದು ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ ಗೆ ಕೊಕ್ ನೀಡಿದೆ.
ಇನ್ನೊಂದೆಡೆ ಹಾಲಿ ಸಂಸದರಿಗೆ, ಕಳೆದ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಸೋತಿದ್ದ, ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರ ಪರಿವಾರ ತೀವ್ರ ಪ್ರತಿರೋಧ ತೋರಿತ್ತು. ಒಂದು ವೇಳೆ ನಳಿನ್ಗೆ ಮತ್ತೆ ಅವಕಾಶ ಕೊಟ್ಟರೆ ಪಕ್ಷೇತರರಾಗಿ ಸ್ಪರ್ಧಿಸುವುದು ಖಚಿತ ಎನ್ನಲಾಗಿತ್ತು. ಆದರೆ ಈಗ ಚೌಟ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದ ಬಳಿಕ ಪುತ್ತಿಲ ಅವರು ವಿಟ್ಲದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ ನಮ್ಮ ಕಾರ್ಯಕರ್ತರ ತೀರ್ಮಾನವೇ ಅಂತಿಮ ಎಂದು ಹೇಳಿದ್ದಾರೆ. ಹೀಗಾಗಿ ಅವರ ಮುಂದಿನ ನಡೆ ಏನು ಎಂಬುವುದು ಕಾದು ನೋಡಬೇಕಿದೆ. ಇನ್ನೊಂದೆಡೆ ಪುತ್ತಿಲ ಪರಿವಾರದಲ್ಲಿ ಒಡಕು ಮೂಡಿದ್ದು, ಪರಿವಾರದ ಪ್ರಮುಖ ಮುಖಂಡ ಪುತ್ತಿಲ ಪರಿವಾರದಿಂದ ಹೊರಕ್ಕೆ ಬಂದಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ಪರಿವಾರದಿಂದ ಹೊರಬಂದ ವಿಚಾರ ಹಂಚಿಕೊಂಡಿರುವ ಮುಖಂಡ ರಾಜಾರಾಮ್ ಭಟ್, ಪುತ್ತಿಲ ಪರಿವಾರದಿಂದ ಹೊರಬಂದಿದ್ದೇನೆ ಎಂದಿದ್ದರು.
ಬಿಜೆಪಿಯಿಂದ ಇನ್ನೋರ್ವ ಟಿಕೆಟ್ ಆಕಾಂಕ್ಷಿಯಾಗಿದ್ದ ಇನ್ನೋರ್ವ ಹಿಂದೂ ಮುಖಂಡ ಸತ್ಯಜಿತ್ ಸುರತ್ಕಲ್ ಟಿಕೆಟ್ ಕೈ ತಪ್ಪಿರುವ ಹಿನ್ನಲೆಯಲ್ಲಿ ಅವರ ಮುಂದಿನ ನಿಲುವು ಇನ್ನಷ್ಟೇ ಸ್ಪಷ್ಟವಾಗಬೇಕಿದೆ.