ಪುತ್ತೂರು, ಮಾ 14(DaijiworldNews/MS): ಮೂರ್ನಾಲ್ಕು ತಿಂಗಳಿನಿಂದ ನಿರಾಶಾದಾಯಕವಾಗಿದ್ದ ಮಂಗಳೂರು ಬಿಳಿ ಚಾಲಿ ಅಡಿಕೆ ಧಾರಣೆ ಇದ್ದಕ್ಕಿದ್ದಂತೆ ಏರಿಕೆಯತ್ತ ಮುಖಮಾಡಿದ್ದು ಬೆಳೆಗಾರರ ಮುಖದಲ್ಲಿ ಮಂದಹಾಸ ಮೂಡಿದೆ. ಈ ಋುತುಮಾನದ ಕೊನೆಯ ಕೊಯ್ಲುಕೂಡ ಮುಗಿದು ಅಡಿಕೆ ಒಣಗುತ್ತಿರುವ ಸೀಸನ್ ಇದಾಗಿದ್ದು, ಮಾರುಕಟ್ಟೆಗೆ ಆವಕ ಸೆಳೆಯುವ ಪ್ರಕ್ರಿಯೆ ಆರಂಭಗೊಂಡಿದೆ.
ಕಳೆದ ಕೆಲ ತಿಂಗಳಲ್ಲಿ ಕುಸಿತದ ಹಾದಿಯಲ್ಲಿದ್ದ ಮಂಗಳೂರು ಚಾಲಿ ಅಡಿಕೆ ಈಗ ಧಾರಣೆ ಏರಿಕೆಯತ್ತ ಮುಖಮಾಡಿದ್ದು, ಕಳೆದೆರಡು ವಾರದ ಧಾರಣೆ ಗಮನಿಸಿದರೆ ಹೊಸ ಅಡಿಕೆಗೆ ಕೆ.ಜಿಗೆ 10 ರೂ. ಸಿಂಗಲ್ ಚೋಲ್ 15 ರೂ. ಡಬ್ಬಲ್ ಚೋಲ್ 20ರೂ. ನಷ್ಟು ಹೆಚ್ಚಳ ಕಂಡಿದೆ.
ಹೊಸ ಅಡಿಕೆ ಧಾರಣೆ 3 ತಿಂಗಳಿನಿಂದ 320 ರಿಂದ 340ರ ಆಸುಪಾಸಿನಲ್ಲೇ ಜೀಕುತ್ತಿತ್ತು. 320ರ ಕನಿಷ್ಠ ದರ ಮತ್ತು 340ರ ಗರಿಷ್ಠ ದರದಲ್ಲಿ ಖರೀದಿಯಾಗುತ್ತಿತ್ತು. ಇದೀಗ ಕ್ಯಾಂಪ್ಕೊ ಕೂಡಾ ಧಾರಣೆ ಏರಿಸುವಲ್ಲಿ ಉತ್ಸಾಹ ತೋರಿದ್ದು ಕಿಲೊ ಒಂದಕ್ಕೆ 5 ರೂ. ಏರಿಸಿದೆ. ಇದರ ಪರಿಣಾಮ ಮಂಗಳವಾರ ದಕ್ಷಿಣ ಕನ್ನಡ ಜಿಲ್ಲೆಯ ಮಾರುಕಟ್ಟೆಯಲ್ಲಿ 347ರ ಧಾರಣೆಯಲ್ಲಿ ಹೊಸ ಅಡಿಕೆ ಖರೀದಿಯಾಗಿದೆ. ಪುತ್ತೂರು ಮತ್ತು ಬೆಳ್ತಂಗಡಿಯ ಖಾಸಗಿ ಮಾರುಕಟ್ಟೆಯಲ್ಲಿ 350ಕ್ಕೆ ಖರೀದಿಯಾಗಿದೆ. ಚುವಾವಣೆಯ ಹೊಸ್ತಿಲಲ್ಲಿ ಧಾರಣೆ ಇನ್ನಷ್ಟು ಏರುವ ಬಗ್ಗೆ ಆಶಾವಾದ ಚಿಗುರಿದೆ.