ಉಡುಪಿ, ಮಾ 13(DaijiworldNews/AA): ಸಂಸದೆ ಶೋಭಾ ಕರಂದ್ಲಾಜೆ ಒಮ್ಮೆಯೂ ಅನ್ಯಾಯದ ವಿರುದ್ಧ ತಮ್ಮ ಧ್ವನಿಯೆತ್ತಲಿಲ್ಲ, ಇಂಥ ಸಂಸದರು ನಿಮಗೆ ಬೇಕಾ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಉಡುಪಿಯಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಸಮಾವೇಶದಲ್ಲಿ ಮಾತನಾಡಿದ ಅವರು, ರಾಜ್ಯದಿಂದ ತೆರಿಗೆ ರೂಪದಲ್ಲಿ ಕೇಂದ್ರಕ್ಕೆ 4.30 ಲಕ್ಷ ಕೋಟಿ ರೂ. ಸಂದಾಯವಾಗುತ್ತಿದ್ದರೂ ಅಲ್ಲಿಂದ ನಮಗೆ ವಾಪಸ್ಸು ಬರುತ್ತಿರೋದು ಕೇವಲ 50,257 ಕೋಟಿ ರೂ. ಮಾತ್ರ. ಈ ರೀತಿ ರಾಜ್ಯಕ್ಕೆ ಅನ್ಯಾಯವಾಗುತ್ತಿದ್ದರೂ ಶೋಭಾ ಕರಂದ್ಲಾಜೆ ಒಮ್ಮೆಯೂ ಅನ್ಯಾಯದ ವಿರುದ್ಧ ತಮ್ಮ ಧ್ವನಿಯೆತ್ತಲಿಲ್ಲ. ಶೋಭಾ ಸೇರಿದಂತೆ ರಾಜ್ಯದ 25 ಬಿಜೆಪಿ ಶಾಸಕರು ಅನ್ಯಾಯವೆಂದು ಹೇಳುತ್ತಿಲ್ಲ. ಈ ಮೂಲಕ ನಾಡಿನ 7 ಕೋಟಿ ಕನ್ನಡಿಗರಿಗೆ ದ್ರೋಹವೆಸಗಿದ್ದಾರೆ ಎಂದು ಕಿಡಿಕಾರಿದ್ದಾರೆ.
ಇನ್ನು ರಾಜ್ಯದಿಂದ 100 ರೂ. ತೆರಿಗೆ ಹಣ ಕೇಂದ್ರಕ್ಕೆ ಹೋದರೆ ಅಲ್ಲಿಂದ ನಮಗೆ ವಾಪಸ್ಸು ಬರೋದು ಕೇವಲ 13 ರೂ. ಮಾತ್ರ. ಇದು ಅನ್ಯಾಯವಲ್ಲವೇ? ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹಣವಿಲ್ಲವೆಂದು ವಿಪಕ್ಷ ನಾಯಕ ಆರ್ ಅಶೋಕ ಮತ್ತು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಸುಳ್ಳು ಹೇಳುತ್ತಿದ್ದಾರೆ. ಅವರು ನನ್ನೊಂದಿಗೆ ಚರ್ಚೆಗೆ ಬರುವಂತೆ ಸವಾಲೆಸೆಯುತ್ತೇನೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.