ಮಂಗಳೂರು, ಮಾ 13(DaijiworldNews/AA): ಸ್ಮಾರ್ಟ್ ಸಿಟಿ ಮಂಗಳೂರು ನಗರದಲ್ಲಿ ಒಂದಲ್ಲ ಒಂದು ಸಮಸ್ಯೆಗಳು ತಲೆದೋರುತ್ತಲೇ ಇದೆ. ಇದೀಗ ಕೋಟಿ ಹಣ ವ್ಯಯಿಸಿ ನಿರ್ಮಿಸಲಾದ ಫುಟ್ ಪಾತ್ ಗಳ ಸ್ಲ್ಯಾಬ್ ಗಳು ಕುಸಿದು ಹೋಗಿದ್ದು, ಕೆಲವೊಂದೆಡೆ ಕೇಬಲ್ ವಯರ್ ಗಳು ಅಪಾಯವನ್ನು ಆಹ್ವಾನಿಸುತ್ತಿದೆ.
ಮಂಗಳೂರು ನಗರದ ಅಭಿವೃದ್ಧಿಗಾಗಿ ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಸಾವಿರಾರು ಕೋಟಿಯ ಅಭಿವೃದ್ಧಿ ಕಾರ್ಯಗಳು ನಡೆಯುತ್ತಲೇ ಇದೆ. ಆದರೆ ಯಾವುದೂ ಕೂಡಾ ಸಾರ್ವಜನಿಕರ ಬಳಕೆಗೆ ಸಿಗುತ್ತಿಲ್ಲ. ನಗರದಾದ್ಯಂತ ನಿರ್ಮಾಣವಾಗಿರುವ ಕೋಟಿ ರೂಪಾಯಿ ಅನುದಾನದ ಫುಟ್ಪಾತ್ ಗಳು ನಾಗರಿಕರ ಪ್ರಾಣಕ್ಕೆ ಕಂಟಕವಾಗಿದೆ. ಆರಂಭದಲ್ಲಿ ಸುಂದರವಾಗಿ ಕಾಣುವ ಫುಟ್ಪಾತ್ ಗಳು ಮುಂದೆ ಸಾಗುತ್ತಿದಂತೆ ಸ್ಲ್ಯಾಬ್ ಕುಸಿತದ ಗುಂಡಿಗಳು ಕಾಣಸಿಗುತ್ತದೆ. ಇನ್ನು ನಗರದ ಕೆಲ ಭಾಗಗಳಲ್ಲಿ ಫುಟ್ ಪಾತ್ ಗಳೇ ಇಲ್ಲದೇ ಪಾದಚಾರಿಗಳು ರಸ್ತೆಯಲ್ಲೇ ನಡೆದು ಹೋಗಬೇಕಾದ ದುಸ್ಥಿತಿಯಿದೆ. ಜೊತೆಗೆ ನಗರದ ಹಲವೆಡೆ ರಸ್ತೆ ಬದಿಯಲ್ಲಿ, ಫುಟ್ ಪಾತ್ ಗಳಲ್ಲೇ ವಾಹನ ನಿಲ್ಲಿಸುವುದರಿಂದ ಪಾದಾಚಾರಿಗಳು ಪರದಾಡುವಂತಾಗಿದೆ.
ಹೀಗೆ ನಗರದ ಬಹುತೇಕ ಕಡೆಗಳ ಫುಟ್ಪಾತ್ ಗಳಲ್ಲಿ ಒಂದೊಂದು ಸಮಸ್ಯೆಗಳು ಕಾಡುತ್ತಿದ್ದು, ಹಲವೆಡೆ ಕೇಬಲ್ ವಯರ್ ಗಳು ಜೋತು ಬಿದ್ದುಕೊಂಡು ಪಾದಚಾರಿಗಳ ಕುತ್ತಿಗೆಗೆ ಸಿಲುಕಿ ಅಪಾಯ ಸಂಭವಿಸುವ ಸಾಧ್ಯತೆ ಕೂಡ ಇದೆ. ಅರ್ಧಂಬರ್ಧ ಕಾಮಗಾರಿಗಳಿಂದಾಗಿ ಅಲ್ಲಲ್ಲಿ ರಸ್ತೆಯನ್ನು ಅಗೆದುಹಾಕಲಾಗಿದೆ. ಜೊತೆಗೆ ಫುಟ್ ಪಾತ್ ಗಳಲ್ಲಿ ತುಂಡಾಗಿ ಬಿದ್ದಿರುವ ಪೈಪ್ ಗಳು, ಕಲ್ಲುಗಳು ಬಿದ್ದಿರುವುದರಿಂದ ನಡೆದಾಡಲು ಪರದಾಡುವಂತಾಗಿದೆ. ಈ ಎಲ್ಲಾ ಸಮಸ್ಯೆಗಳಿಗೆ ಸ್ಮಾರ್ಟ್ ಸಿಟಿ ಅಧಿಕಾರಿಗಳು, ಜನಪ್ರತಿನಿಧಿಗಳು ಶೀಘ್ರವೇ ಮುಕ್ತಿ ನೀಡುವಂತೆ ಜನಸಾಮಾನ್ಯರು ಆಗ್ರಹಿಸಿದ್ದಾರೆ.