ಶಿರಾಡಿ, ಮಾ 13(DaijiworldNews/MS): ಬೆಂಗಳೂರು -ಮಂಗಳೂರು ರಾಷ್ಟ್ರೀಯ ಹೆದ್ದಾರಿ -75ರ ಶಿರಾಡಿಘಾಟ್ನಲ್ಲಿ ಅನಿಲ ಸಾಗಿಸುತ್ತಿದ್ದ ಟ್ಯಾಂಕರ್ ವೊಂದು ಪಲ್ಟಿಯಾಗಿ ಟ್ಯಾಂಕರ್ನಿಂದ ಗ್ಯಾಸ್ ಸೋರಿಕೆಯಾಗುತ್ತಿರುವ ಘಟನೆ ಬುಧವಾರ ಬೆಳಿಗ್ಗೆ ನಡೆದಿದೆ.
ಶಿರಾಡಿಘಾಟ್ ರಸ್ತೆಯ ಡಬಲ್ ಕ್ರಾಸ್ ಸನಿಹದ ಹೆದ್ದಾರಿಯ ತಿರುವಿನಲ್ಲಿ ಚಾಲಕನ ನಿಯಂತ್ರಣ ಸಿಗದೆ ಗ್ಯಾಸ್ ಟ್ಯಾಂಕರ್ ವೊಂದು ಪಲ್ಟಿಯಾಗಿ ಗ್ಯಾಸ್ ಸೋರಿಕೆಯಾಗುತ್ತಿದೆ. ಮುನ್ನಚ್ಚರಿಕಾ ಕ್ರಮವಾಗಿ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದ್ದು, ನೂರಾರು ವಾಹನ ಸವಾರರು ಸೋರಿಕೆ ಸ್ಥಗಿತಗೊಳಲು ಕಾಯುತ್ತಿದ್ದಾರೆ
ಮಂಗಳೂರು-ಹಾಸನ-ಬೆಂಗಳೂರು ಮಾರ್ಗದಲ್ಲಿ ಸಂಚರಿಸುವ ವಾಹನಗಳನ್ನು ಬದಲಿ ಮಾರ್ಗದಲ್ಲಿ ಪೊಲೀಸರು ಕಳುಹಿಸುತ್ತಿದ್ದು, ಘಟನಾ ಸ್ಥಳಕ್ಕೆ ಅಗ್ನಿಶಾಮಕದಳ ಹಾಗೂ ಪೊಲೀಸರು ತಲುಪಿದೆ. ಆದ್ರೆ ಸೋರಿಕೆ ಪರೀಕ್ಷೆಗೆ ಮಂಗಳೂರಿನ ಎಮ್. ಆರ್. ಪಿ. ಎಲ್ ನಿಂದ ತಜ್ಞರ ತಂಡ ಇನ್ನಷ್ಟೇ ಘಟನಾ ಸ್ಥಳಕ್ಕೆ ತಲುಪಬೇಕಿದೆ.
ಮಂಗಳೂರು ಧರ್ಮಸ್ಥಳಕ್ಕೆ ತೆರಳುವವರು ಸಕಲೇಶಪುರದಿಂದ ಹಾನುಬಾಳು ಮಾರ್ಗವಾಗಿ ಮೂಡಿಗೆರೆ ಮೂಲಕ ತೆರಳಲು ಸೂಚನೆ ನೀಡಲಾಗಿದೆ. ಮಂಗಳೂರಿನಿಂದ ಹಾಸನ ಬೆಂಗಳೂರಿಗೆ ತೆರಳುವವರು ಗುಂಡ್ಯ ಬಿಸ್ಲೆ ಹಾಗೂ ಚಾರ್ಮಾಡಿ ಮಾರ್ಗವಾಗಿ ತೆರಳಲು ಸೂಚನೆ ನೀಡಲಾಗಿದೆ. ಪಲ್ಟಿಯಾದ ಗ್ಯಾಸ್ ಟ್ಯಾಂಕರ್ನಿಂದ ಭಾರಿ ಪ್ರಮಾಣದಲ್ಲಿ ಗ್ಯಾಸ್ ಸೋರಿಕೆಯಾಗಿದೆ. ಹೀಗಾಗಿ ಗ್ಯಾಸ್ ಟ್ಯಾಂಕರ್ ತೆರವು ಕಾರ್ಯಾಚರಣೆ ಮುಗಿಯುವವರೆಗೂ ಎಲ್ಲಾ ವಾಹನಗಳ ಸಂಚಾರ ಬಂದ್ ಆಗಲಿದೆ.