ಮಂಗಳೂರು, ಮಾ 13(DaijiworldNews/MS): ಕರಾವಳಿ ಭಾಗದ ಬಹು ಬೇಡಿಕೆಯ ಮಂಗಳೂರಿನಿಂದ ಬೆಂಗಳೂರಿಗೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸಂಚಾರ ಜೂನ್ ತಿಂಗಳಿನಿಂದ ಆರಂಭವಾಗುವ ನಿರೀಕ್ಷೆ ಇದ್ದು , ಕಾಮಗಾರಿ ಭರದಿಂದ ಸಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ತಿಳಿಸಿದ್ದಾರೆ.
ನಗರದಲ್ಲಿ ಮಂಗಳೂರು ಸೆಂಟ್ರಲ್-ತಿರುವನಂತಪುರ ನಡುವಿನ ವಿಸ್ತರಿತ ವಂದೇ ಭಾರತ್ ಚಾಲನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲ್ , ಮಂಗಳೂರಿನಿಂದ - ರಾಜ್ಯ ರಾಜಧಾನಿ ಬೆಂಗಳೂರಿಗೆ "ವಂದೇ ಭಾರತ್" ರೈಲು ಸೇವೆಯನ್ನು ವಿಸ್ತರಿಸಬೇಕೆಂಬುವುದು ಈ ಭಾಗದ ಜನರ ಬಹು ದಿನಗಳ ಬೇಡಿಕೆಯಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರದಿಂದ ಸಕಾರಾತ್ಮಕ ಸ್ಪಂದನೆ ಈಗಾಗಲೇ ದೊರಕಿದ್ದು ಇದರ ಕಾಮಗಾರಿ ಆರಂಭವಾಗಿದೆ. ಈ ರೈಲು ಮಾರ್ಗದ ವಿದ್ಯುದೀಕರಣದ ಕೆಲಸ ನಡೆಯುತ್ತಿದ್ದು, ಶಿರಾಡಿಯಲ್ಲಿನ ಸುಮಾರು 22 ಕಿ.ಮೀ. ದೂರದ ಕಾಮಗಾರಿ ಮೇ ಅಂತ್ಯದೊಳಗೆ ಮುಗಿಯಲಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಜೂನ್ನಿಂದ ಬಹು ನಿರೀಕ್ಷಿತ ವಂದೇ ಭಾರತ್ ರೈಲು ಸಂಚಾರ ಆರಂಭವಾಗಲಿದೆ ಎಂದು ಹೇಳಿದ್ದಾರೆ.
ಕರಾವಳಿಯ ಭಾಗದಿಂದ ಅಯೋಧ್ಯೆಗೆ ರೈಲು ಆರಂಭಿಸುವ ಬಗ್ಗೆ ಆಗ್ರಹ ಕೇಳಿಬಂದಿದ್ದು, ಈ ಸಂಬಂಧ ಈಗಾಗಲೇ ರೈಲು ಸಚಿವರಿಗೆ ಮನವಿ ಮಾಡಿದ್ದೇನೆ. ಇದಕ್ಕೂ ವೇಳಾಪಟ್ಟಿ ಸಿದ್ದವಾಗುತ್ತಿದ್ದು, ಶೀಘ್ರ ರೈಲು ಆರಂಭವಾಗಲಿದೆ. ಇದಲ್ಲದೇ ಅಯೋಧ್ಯೆಗೆ ಇಲ್ಲಿಂದ ವಿಮಾನ ಬೇಕು ಎನ್ನುವ ಬೇಡಿಕೆಯೂ ಇದೆ. ವಿಮಾನಯಾನ ಸಚಿವರಿಗೆ ಹಾಗೂ ಇಲಾಖೆ ಕಾರ್ಯದರ್ಶಿಯವರಿಗೆ ಪತ್ರ ಬರೆಯಲಾಗಿದೆ. ವಯಾ ಬೆಂಗಳೂರು ಅಥವಾ ಮುಂಬಯಿ ಮೂಲಕ ವಿಮಾನ ಆರಂಭಿಸುವಂತೆ ಕೋರಲಾಗಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.