ಮಂಗಳೂರು, ಮಾ 12(DaijiworldNews/AA): ಬಿಸಿಲ ಬೇಗೆ ಅತಿಯಾಗಿದ್ದು ಚಿಕ್ಕ ಮಕ್ಕಳು ಹಾಗೂ ವೃದ್ಧರಲ್ಲಿ ಹಲವಾರು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದೆ. ಅತಿಯಾದ ತಾಪಮಾನದಿಂದ ಹೀಟ್ ವೇವ್ ಹಾಗೂ ಹೀಟ್ ಸ್ಟ್ರೋಕ್ ಉಂಟಾಗುವ ಸಾಧ್ಯತೆಗಳಿವೆ ಎಂದು ದ.ಕ ಜಿಲ್ಲಾ ಹವಾಮಾನ ನಿಯಂತ್ರಣ ಕಾರ್ಯಕ್ರಮ ನೋಡಲ್ ಅಧಿಕಾರಿ ಡಾ. ನವೀನ್ ಚಂದ್ರ ಕುಲಾಲ್ ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಅವರು, ಹೀಟ್ ವೇವ್ ಕಾಯಿಲೆಯನ್ನು ಗುಣಪಡಿಸಬಹುದು. ಹೀಟ್ ವೇ ಮೊದಲ ಲಕ್ಷಣ ಕಾಲು ಬಾವು ಬರುವುದು. 2ನೇ ಹಂತದಲ್ಲಿ ಮಾಂಸಖಂಡಗಳು ಹಿಡಿದುಕೊಳ್ಳುವುದು, 3 ನೇ ಹಂತದಲ್ಲಿ ತಲೆ ಸುತ್ತುವಿಕೆ ಕಂಡು ಬರುತ್ತದೆ. 4 ನೇ ಹಂತಕ್ಕೆ ತಲುಪಿದರೆ ಹೀಟ್ ಸ್ಟ್ರೋಕ್ ಉಂಟಾಗುತ್ತದೆ. ಹೀಟ್ ಸ್ಟ್ರೋಕ್ ಮನುಷ್ಯನಿಗೆ ಅತ್ಯಂತ ಅಪಾಯಕಾರಿಯಾಗಿದ್ದು, ಇದು ಹೆಚ್ಚಾಗಿ ಪರಿಣಾಮ ಬೀರುವುದು ಚಿಕ್ಕ ಮಕ್ಕಳು ಹಾಗೂ ವೃದ್ಧರಿಗೆ ಎಂದು ಹೇಳಿದರು.
ಹೆಚ್ಚು ಬಿಸಿಲಿನ ಸಂದರ್ಭದಲ್ಲಿ ಹೊರಗಡೆ ಹೋಗಬೇಡಿ. ಹೆಚ್ಚು ನೀರು ಕುಡಿಯಿರಿ, ಲಿಂಬೆ ರಸದಂತಹ ತಂಪು ಪಾನೀಯ ಸೇವಿಸಿ. ತಿಳಿ ಬಣ್ಣದ, ಕಾಟನ್ ಅಥವಾ ಹತ್ತಿ ಬಟ್ಟೆಗಳನ್ನೇ ಹೆಚ್ಚಾಗಿ ಬಳಸಿ. ಈಗಾಗಲೇ ಹೀಟ್ ವೇವ್ ಪರಿಣಾಮದ ಬಗ್ಗೆ ಶಾಲೆಗಳಿಗೂ ಸುತ್ತೋಲೆ ಕಳುಹಿಸಲಾಗಿದೆ. ಕುದಿಸಿ ಆರಿಸಿದ ಶುದ್ಧ ನೀರನ್ನೆ ಕುಡಿಯಿರಿ. ಅತಿಯಾದ ಸಿಹಿ ಅಥವಾ ಖಾರವಾದ ಆಹಾರಪದಾರ್ಥಗಳು ಉತ್ತಮವಲ್ಲ ಎಂದು ಅವರು ಸಲಹೆ ನೀಡಿದ್ದಾರೆ.