ಮಂಗಳೂರು, ಮಾ 12 (daijiworld/PP): ಇನ್ನೇನು ಎಸೆಸೆಲ್ಸಿ ಪರೀಕ್ಷೆಗೆ ಕೆಲವೇ ದಿನಗಳು ಬಾಕಿ ಇವೆ. ಮಾ. 25 ರಿಂದ ನಡೆಯುಲಿರುವ ಪರೀಕ್ಷೆಗೆ ವಿದ್ಯಾರ್ಥಿಗಳು ಭರದ ತಯಾರಿ ನಡೆಸುತ್ತಿದ್ದಾರೆ. ಈ ನಡುವೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಹಿಂದೆ ಇದ್ದ ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 13 ಪರೀಕ್ಷಾ ಕೇಂದ್ರಗಳನ್ನು ರದ್ದುಪಡಿಸಲಾಗಿದೆ. ಪರೀಕ್ಷಾ ಕೇಂದ್ರಗಳ ಸಾಮರ್ಥ್ಯಕ್ಕೆ ತಕ್ಕಂತೆ ಪರೀಕ್ಷಾರ್ಥಿಗಳ ಸಂಖ್ಯೆ ಇಲ್ಲದಿರುವುದರಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ. ನಿಯಮ ಪ್ರಕಾರ ಇಲಾಖೆ ಕ್ರಮ ಕೈಗೊಂಡಿದೆಯಾದರೂ, ಇದರಿಂದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಸಮಸ್ಯೆಗಳನ್ನು ಎದುರಿಸುವಂತಾಗಿದೆ.
ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಮಂಗಳೂರು ಉತ್ತರ ಹಾಗೂ ಮಂಗಳೂರು ದಕ್ಷಿಣ , ಉಳ್ಳಾಲ ವಲಯಗಳು ಸೇರಿದಂತೆ ಒಟ್ಟು 13 ಎಸೆಸೆಲ್ಸಿ ಪರೀಕ್ಷಾ ಕೇಂದ್ರಗಳನ್ನು ರದ್ದುಗೊಳಿಸಲಾಗಿದೆ. ಪರೀಕ್ಷಾ ಕೇಂದ್ರ ರದ್ದುಪಡಿಸಿರುವುದರಿಂದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೇ ಹೆಚ್ಚಿನ ಸಮಸ್ಯೆಗಳಾಗುತ್ತಿದ್ದು ದೂರದ ಪರೀಕ್ಷಾ ಕೇಂದ್ರಗಳಿಗೆ ತೆರಳುವ ಸಂದರ್ಭ ಪ್ರಯಾಣದಲ್ಲೇ ಅಧಿಕ ಸಮಯ ವ್ಯರ್ಥವಾಗುತ್ತದೆ ಹೀಗಾಗಿ ರದ್ದಾಗಿರುವ ಪರೀಕ್ಷಾ ಕೇಂದ್ರಗಳನ್ನು ಮತ್ತೆ ಅಲ್ಲೇ ತೆರೆಯಬೇಕೆಂದು ವಿದ್ಯಾರ್ಥಿಗಳು ಹಾಗೂ ಪೋಷಕರು ಮನವಿ ಮಾಡಿದ್ದಾರೆ.
ಈ ಹಿಂದೆ ಜಿಲ್ಲೆಯಲ್ಲಿ 98 ಪರೀಕ್ಷಾ ಕೇಂದ್ರಗಳಿದ್ದು ಈ ಬಾರಿ 88 ಕೇಂದ್ರಗಳಿಗೆ ಇಳಿಕೆಯಾಗಿದೆಯಾದರೂ ಬಂಟ್ವಾಳ ತಾಲೂಕಿನಲ್ಲಿ 1, ಮಂಗಳೂರು ಉತ್ತರದಲ್ಲಿ 1, ಮಂಗಳೂರು ದಕ್ಷಿಣದಲ್ಲಿ 1 ಸೇರಿದಂತೆ ಒಟ್ಟು 3 ಹೊಸ ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. 51 ಪರೀಕ್ಷಾ ಕೇಂದ್ರಗಳಿರುವ 5 ವಲಯಗಳಿರುವ ಉಡುಪಿ ಜಿಲ್ಲೆಯಲ್ಲಿ ಈ ಹಿಂದೆ ಇದ್ದ ಬೈಂದೂರು-8, ಕುಂದಾಪುರ-8, ಕಾರ್ಕಳ-9, ಬ್ರಹ್ಮಾವರ -11, ಉಡುಪಿಯ 15 ಕೇಂದ್ರಗಳಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ. ಇಲಾಖೆಯ ನಿಯಮಾನುಸಾರ ಪರೀಕ್ಷಾ ಕೇಂದ್ರಗಳಲ್ಲಿ 250 ವಿದ್ಯಾರ್ಥಿಗಳು ಇರಬೇಕು. ಕನಿಷ್ಟ 180 ರಿಂದ 200 ವಿದ್ಯಾರ್ಥಿಗಳಾದರೂ ಇರಲೇಬೇಕು ಆದರೆ ಅದಕ್ಕಿಂತ ಕಡಿಮೆ ವಿದ್ಯಾರ್ಥಿಗಳ ಸಂಖ್ಯೆ ಇರುವ ಪರೀಕ್ಷಾ ಕೇಂದ್ರಗಳನ್ನು ಅನಿವಾರ್ಯವಾಗಿ ರದ್ದು ಪಡಿಸಬೇಕಾಗುತ್ತದೆ ಹಾಗಾಗಿ 13 ಕೇಂದ್ರಗಳನ್ನು ರದ್ದು ಪಡಿಸಲಾಗಿದ್ದು, ವಿದ್ಯಾರ್ಥಿಗಳು ಹತ್ತಾರು ಕಿಲೋಮೀಟರ್ ವರೆಗೆ ಕ್ರಮಿಸಿ ಪರೀಕ್ಷೆ ಬರೆಯುವಂತ ಸ್ಥಿತಿ ಎದುರಾಗಿದೆ.