ಸುಳ್ಯ ,ಮಾ 12 (DajiworldNews/AK):ಜೆಸಿಬಿ ಮೂಲಕ ಅಗೆತ ವೇಳೆ ಸುರಂಗ ಮಾದರಿ ಪತ್ತೆಯಾಗಿರುವ ಕುತೂಹಲಕಾರಿ ಘಟನೆ ಸುಳ್ಯ ತಾಲೂಕಿನ ಕಲ್ಮಕಾರು ಎಂಬಲ್ಲಿ ನಡೆದಿದೆ.
ಕಲ್ಮಕಾರು ಗ್ರಾಮದ ಬಿಳಿಮಲೆ ಉಮೇಶ್ ಎಂಬವರಿಗೆ ಸೇರಿದ ಜಮೀನಿನ ರಬ್ಬರ್ ತೋಟದಲ್ಲಿ ಜೆಸಿಬಿ ಮೂಲಕ ಅಗೆತ ನಡೆಸುವ ವೇಳೆ ಮಾದರಿ ಪತ್ತೆಯಾಗಿದೆ. ಉಮೇಶ್ ಅವರು ತಮ್ಮ ರಬ್ಬರ್ ತೋಟದಲ್ಲಿ ಅಗೆತ ಮಾಡಿ ಅರಣ್ಯ ಕೃಷಿ ಉದ್ದೇಶದಿಂದ ಜೆಸಿಬಿ ಕೆಲಸ ಆರಂಭಿಸಿದ್ದರು.
ಜಮೀನಿನಲ್ಲಿ ಪೊದೆ, ಮುಳ್ಳುಗಳಿಂದ ಕೂಡಿದ್ದ ಜಾಗದಲ್ಲಿ ಅಗೆತ ವೇಳೆ ಮುಚ್ಚಳದ ಮಾದರಿ ಪತ್ತೆಯಾಗಿದ್ದು, ಅದನ್ನು ತೆಗೆದ ವೇಳೆ ಸುರಂಗ ಪತ್ತೆಯಾಗಿದ್ದು, ಒಳಭಾಗ ದೊಡ್ಡಗಾತ್ರದ ಸ್ನಾನದ ಹಂಡೆ ಮಾದರಿಯಲ್ಲಿದೆ, ಸುಮಾರು ೬ ಫೀಟ್ ಎತ್ತರ ಆಳವಿದೆ. ಕೆತ್ತನೆ ಮೂಲಕ ನಿರ್ಮಿಸಿರುವುದು ಕಂಡುಬಂದಿದೆ. ಹಿಂದಿನ ಕಾಲದಲ್ಲಿ ಅಡಗು ತಾಣವಾಗಿ ನಿರ್ಮಿಸಲಾದ ತಾಣ ಇದು ಇರಬಹುದು ಎಂದು ಶಂಕಿಸಲಾಗಿದೆ.