ಬಂಟ್ವಾಳ, ನ 18: ಸಚಿವ ರಮಾನಾಥ ರೈ ಹಾಗೂ ಕೆಪಿಸಿಸಿ ಕಾರ್ಯದರ್ಶಿ ಅಶ್ವಿನ್ ರೈ ನಡುವಿನ ಭಿನ್ನಾಭಿಪ್ರಾಯದಿಂದಾಗಿ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ಗೆ ಒಳಪಟ್ಟ ಪಕ್ಷದ ಏಕೈಕ ಸ್ವಂತ ಕಟ್ಟಡ ಉದ್ಘಾಟನೆಯಾಗದೇ ಅನಾಥವಾಗಿದೆ.
ಬಿ.ಸಿ.ರೋಡಿನ ಹೃದಯ ಭಾಗದಲ್ಲಿ ಕಳೆದ 46 ವರ್ಷಗಳ ಹಿಂದೆಯೇ ಕಾಂಗ್ರೆಸ್ ಹೆಸರಿನಲ್ಲಿ ಪಕ್ಷದ ಮುಖಂಡರು ಸ್ವಂತ ಕಾಂಗ್ರೆಸ್ ಭವನ ನಿರ್ಮಿಸಲು ಸ್ಥಳ ಕಾದಿರಿಸಿದ್ದರು. ಆದರೆ ಕೆಲ ಸಮಸ್ಯೆಯಿಂದ ಭವನ ನಿರ್ಮಿಸಲು ಪಕ್ಷದ ಮುಖಂಡರಿಗೆ ಸಾಧ್ಯವಾಗಿರಲಿಲ್ಲ. ಕಳೆದ ಆರು ವರ್ಷಗಳ ಹಿಂದೆ ಇಲ್ಲಿನ ಖ್ಯಾತ ವಕೀಲ, ಕೆಪಿಸಿಸಿ ಕಾರ್ಯದರ್ಶಿ ಅಶ್ವಿನ್ ಕುಮಾರ್ ರೈ ಅವರನ್ನು ಕಟ್ಟಡ ನಿರ್ಮಾಣ ಸಮಿತಿ ಅಧ್ಯಕ್ಷರನ್ನಾಗಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ನೇಮಿಸಿದ್ದರು.
ಅಶ್ವಿನ್ ಕುಮಾರ್ ರೈ ಅವರ ಪ್ರಯತ್ನದ ಫಲವಾಗಿ ಕಳೆದ ಲೋಕಸಭಾ ಚುನಾವಣೆಗೆ ಮೊದಲೇ ಒಟ್ಟು ರೂ 26.5 ಲಕ್ಷ ವೆಚ್ಚದಲ್ಲಿ ನೆಲ ಅಂತಸ್ತು ಹೊರತುಪಡಿಸಿ ಎರಡು ಮಹಡಿ ಹೊಂದಿರುವ ಸುಸಜ್ಜಿತ ಕಾಂಗ್ರೆಸ್ ಭವನ ನಿರ್ಮಾಣಗೊಂಡಿದೆ.
ಈ ಪೈಕಿ ಕಾಂಗ್ರೆಸ್ ಮುಖಂಡರು ಮತ್ತು ದಾನಿಗಳಿಂದ ರೂ 12.10 ಲಕ್ಷ ಮಾತ್ರ ದೇಣಿಗೆ ಸಂಗ್ರಹಿಸಲಾಗಿದ್ದರೆ, ಉಳಿದಂತೆ ಕಟ್ಟಡ ನಿರ್ಮಾಣ ಸಮಿತಿಯ ಅಧ್ಯಕ್ಷ ಅಶ್ವಿನ್ ಅವರೇ ವೆಚ್ಚ ಭರಿಸಿದ್ದಾರೆ. ಇದೀಗ ಅಶ್ವಿನ್ ರೈ ಹಾಗೂ ರಮಾನಾಥ ರೈ ಅವರ ನಡುವಿನ ಭಿನ್ನಾಭಿಪ್ರಾಯಗಳಿಂದಾಗಿ ಈ ಕಾಂಗ್ರೆಸ್ ಭವನ ಅನಾಥವಾಗಿದೆ.