ಬಂಟ್ವಾಳ, ಮಾ 11 (DajiworldNews/AA): ಕಾನೂನು ಬಾಹಿರವಾಗಿ ಆಟೋರಿಕ್ಷಾ ಓಡಿಸುತ್ತಿದ್ದ ವ್ಯಕ್ತಿಯೋರ್ವನನ್ನು ಟ್ರಾಫಿಕ್ ಪೋಲೀಸರು ತಡೆದು ದಂಡ ಹಾಕಿದ್ದಾರೆ. ಈ ಕಾರಣಕ್ಕೆ ಆವೇಶಕ್ಕೊಳಗಾದ ಚಾಲಕ ಟ್ರಾಫಿಕ್ ಎಸ್.ಐ.ಹಾಗೂ ಸರಕಾರಿ ವಾಹನಕ್ಕೆ ಮತ್ತು ಆಟೋ ರಿಕ್ಷಾಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಮುಂದಾದ ಘಟನೆ ಬಂಟ್ವಾಳ ಬಿಸಿರೋಡಿನ ಕೈಕಂಬ ಎಂಬಲ್ಲಿ ಸೋಮವಾರ ನಡೆದಿದೆ.
ಗೂಡಿನಬಳಿ ನಿವಾಸಿ ಮಹಮ್ಮದ್ ಅನ್ಸಾರ್ ಪ್ರಕರಣದ ಆರೋಪಿಯಾಗಿದ್ದು, ಸದ್ಯ ತಲೆಮರೆಸಿಕೊಂಡಿರುತ್ತಾನೆ.
ಟ್ರಾಫಿಕ್ ಎಸ್ಐ. ಸುತೇಶ್ ಅವರು ಕೈಕಂಬದಲ್ಲಿ ವಾಹನಗಳ ತಪಾಸಣಾ ಕಾರ್ಯದಲ್ಲಿ ತೊಡಗಿದ್ದ ವೇಳೆ, ಯೂನಿಫಾರ್ಮ್ ಹಾಕದೆ ಮೊಬೈಲ್ ನಲ್ಲಿ ಮಾತನಾಡಿಕೊಂಡು ಆರೋಪಿ ಮಹಮ್ಮದ್ ಅನ್ಸಾರ್ ರಿಕ್ಷಾ ಓಡಿಸುತ್ತಿದ್ದ. ಚಾಲಕನನ್ನು ನಿಲ್ಲಿಸಿದ ಪೊಲೀಸರು, ಆತನ ಮೇಲೆ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ ಕಾರಣಕ್ಕಾಗಿ 2 ಸಾವಿರ ದಂಡ ಹಾಕಿ ನೋಟೀಸ್ ನೀಡಿದರು. ಇದೇ ಕಾರಣದಿಂದ ಆರೋಪಿ ಸಾರ್ವಜನಿಕವಾಗಿ ಬೀದಿ ರಂಪಾಟ ಮಾಡಿ, ಪೋಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆ. ಬಳಿಕ ರಿಕ್ಷಾವನ್ನು ಪೋಲೀಸರ ಎದುರಿನಲ್ಲಿಯೇ ಸುಟ್ಟುಹಾಕುವುದಾಗಿ ಬೆದರಿಸಿದ್ದಾನೆ. ಎಸ್ ಐ ಹಾಗೂ ಜೀಪ್ ಮೇಲೆ ಪೆಟ್ರೋಲ್ ಸುರಿದು ಬೆಂಕಿ ನೀಡಲು ಮುಂದಾಗಿದ್ದಾನೆ ಎಂದು ತಿಳಿದುಬಂದಿದೆ.
ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಲ್ಲದೆ ಸಾರ್ವಜನಿಕವಾಗಿ ಪೆಟ್ರೋಲ್ ಸುರಿದು ಬೆಂಕಿ ಹಾಕಿ ಅನಾಹುತಕ್ಕೆ ಕಾರಣನಾದ ಆಟೋ ಚಾಲಕ ಮಹಮ್ಮದ್ ಅನ್ಸಾರ್ ವಿರುದ್ಧ ಟ್ರಾಫಿಕ್ ಎಸ್ಐ. ಸುತೇಶ್ ಅವರು ದೂರು ನೀಡಿದ್ದಾರೆ. ಇದೀಗ ಅವರ ದೂರಿನಂತೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.