ಗಂಗೊಳ್ಳಿ, ಮಾ 10(DaijiworldNews/AK): ನಾನು ಮಂತ್ರಿಯಾಗಿ ಗುರುತಿಸಿಕೊಳ್ಳುವುದಕ್ಕಿಂತ ಜನಸಾಮಾನ್ಯನಾಗಿ ಗುರುತಿಸಿಕೊಳ್ಳುವ ಬಗ್ಗೆ ಇಷ್ಟಪಡುತ್ತೇನೆ. ಮೀನುಗಾರರು ನನ್ನೆಲ್ಲ ಬಂಧುಗಳು ಮೀನುಗಾರ ಸಮುದಾಯದಿಂದಾಗಿ ನನಗೆ ಇಂದು ಸಚಿವನಾಗುವ ಯೋಗ ಬಂದಿದೆ ಎಂದು ರಾಜ್ಯ ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವ ಮಾಂಕಾಳ್ ಎಸ್ ವೈದ್ಯ ಹೇಳಿದರು.
ಅವರು ಭಾನುವಾರ ಮೀನುಗಾರಿಕಾ ಇಲಾಖೆಯ ವತಿಯಿಂದ ಗಂಗೊಳ್ಳಿ ಬಂದರಿನಲ್ಲಿ ಸಂತ್ರಸ್ತ ಮೀನುಗಾರರಿಗೆ ಪರಿಹಾರ ವಿತರಣೆ ಹಾಗೂ ಮೀನುಗಾರರಿಗೆ ಇಲಾಖೆಯ ವಿವಿಧ ಸವಲತ್ತುಗಳ ವಿತರಣಾ ಕಾರ್ಯಕ್ರಮ ವನ್ನು ಉದ್ಘಾಟಿಸಿ ಫಲಾನುಭವಿಗಳಿಗೆ ಪರಿಹಾರ ವಿತರಿಸಿ ಮಾತನಾಡಿ, ನಾನು ಸಚಿವನಾದ ಮೇಲೆ ಬೋಟು ಅಥವಾ ದೋಣಿ ದುರಂತಕ್ಕೊಳ್ಳಗಾದರೆ 24 ಗಂಟೆಯೊಳಗೆ 1 ರಿಂದ 10 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು. ಒಂದು ವೇಳೆ ಮೀನುಗಾರಿಕೆ ಸಂದರ್ಭ ಮೀನುಗಾರ ಕಾರ್ಮಿಕ ಸಾವನ್ನಪ್ಪಿದರೆ 8 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದರು.
ಮೀನುಗಾರರು ಯಾವತ್ತೂ ಸಹಾಯಕ್ಕಾಗಿ ಇನ್ನೊಬ್ಬರೊಂದಿಗೆ ಕೈಚಾಚಬಾರದು ಎನ್ನುವ ಉದ್ದೇಶದಿಂದ ಸುಮಾರು 5000 ಕೋಟಿಗಳ ಬಜೆಟ್ ಮೀನುಗಾರಿಕಾ ಇಲಾಖೆ ಮತ್ತು ಬಂದರು ಇಲಾಖೆಗೆ ಒದಗಿಸಲಾಗುತ್ತಿದೆ ಎಂದರು.
ಕರಾವಳಿಯ ಭಾಗದಲ್ಲಿ ಮೀನುಗಾರಿಕಾ ಇಲಾಖೆಯಲ್ಲಿ ಕರಾವಳಿಗಳಿಗೆ ಯಾವುದೇ ಹುದ್ದೆಗಳು ಸಿಗುತ್ತಿಲ್ಲ ಕೃಷಿ ಭೂಮಿ ಇಲ್ಲದವರಿಗೆ ಮೀನುಗಾರಿಕಾ ಮತ್ತು ಬಂದರೂ ಇಲಾಖೆಯಲ್ಲಿ ಅಧಿಕಾರಿಗಳಾಗಿ ಆಯ್ಕೆಯಾಗಲು ಅವಕಾಶ ಇಲ್ಲದಿರುವುದನ್ನು ಮನಗಂಡು ಮುಂದಿನ ದಿನಗಳಲ್ಲಿ ಕೃಷಿಭೂಮಿ ಇಲ್ಲದೆ ಇರುವವರೆಗೂ ಕೂಡ ಸರಕಾರಿ ಸೌಲಭ್ಯ ಒದಗಿಸುವ ಭರವಸೆ ನೀಡಿದರು.
ಇದೇ ಸಂದರ್ಭ ಗಂಗೊಳ್ಳಿಯಲ್ಲಿ 13 11 2018 ರಂದು ನಡೆದ ದೋಣಿ ಅಗ್ನಿ ದುರಂತ ದಲ್ಲಿ ಸಂತ್ರಸ್ತರಾದವರಿಗೆ ಪರಿಹಾರ ಪತ್ರ ವಿತರಿಸಲಾಯಿತು. ಅಲ್ಲದೆ ಶಿರೂರಿನ ಅಳ್ವೆಗದ್ದೆಯಲ್ಲಿ ನಡೆದ ದೋಣಿ ದುರಂತದಲ್ಲಿ ಸಾವನ್ನಪ್ಪಿದವರ ಕುಟುಂಬಕ್ಕೆ ಪರಿಹಾರ ಪತ್ರ, ಅರ್ಹರಿಗೆ ಲೈಫ್ ಜಾಕೆಟ್ ಹಾಗೂ ಲೈಫ್ ಬಾಯ್ ಗಳನ್ನು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀನುಗಾರರಿಗೆ ಪರಿಹಾರ ಕಿಟ್ ವಿತರಿಸಲಾಯಿತು.
ಉಡುಪಿ ಶಾಸಕ ಯಶಪಾಲ ಸುವರ್ಣ ಮಾತನಾಡಿ,ಜೀವದ ಹಂಗು ತೊರೆದು ಬದುಕು ಕಟ್ಟಿಕೊಳ್ಳುವವರು ಮೀನುಗಾರರು. ಕರಾವಳಿ ಮೀನುಗಾರಿಕೆ ದೇಶದ ಆರ್ಥಿಕತೆಗೆ ದೊಡ್ಡ ಕೊಡುಗೆ ನೀಡಿದೆ. ಆದರೆ ಈಗ ಮೀನುಗಾರಿಕೆಗೆ ಪ್ರತಿಕೂಲ ಪರಿಸ್ಥಿತಿ ನಿರ್ಮಾಣವಾಗಿದ್ದು, ಪರ್ಸಿನ್ ಬೋಟುಗಳ ಸಂಖ್ಯೆ ಕಡಿಮೆಯಾಗುತ್ತಿದೆ. ನಾಡ ದೋಣಿ ಮೀನುಗಾರರು ಸೀಮೆಣ್ಣೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ವಿಕೋಪಕ್ಕೊಳಗಾದ ಸಂತ್ರಸ್ತರಿಗೆ 8 ಲಕ್ಷ ಮೊತ್ತದ ಪರಿಹಾರ ನೀಡಲಾಗುತ್ತಿದೆ. ಇದೆಲ್ಲವನ್ನು ಗಮನಿಸಿ ಗಂಗೊಳ್ಳಿ ಬಂದರು ಅಭಿವೃದ್ಧಿಗೆ ಮೀನುಗಾರಿಕಾ ಸಚಿವರು ಮತ್ತು ರಾಜ್ಯ ಸರ್ಕಾರ ಮಾಸ್ಟರ್ ಪ್ಲಾನ್ ಮಾಡಬೇಕಿದೆ ಎಂದರು.