ಉಡುಪಿ, ಮಾ 10(DaijiworldNews/AA): ನಗರದ ರಾಷ್ಟ್ರೀಯ ಹೆದ್ದಾರಿ 66, ನಿಟ್ಟೂರು, ಹುಂಡೈ ಶೋರೂಮ್ ಬಳಿ, ಡಾಮರೀಕರಣ ಕಾಮಗಾರಿಯು ಕಳಪೆ ಮಟ್ಟದಲ್ಲಿ ನಡೆದಿರುವುದು ಕಂಡುಬಂದಿದೆ. ಹೆದ್ದಾರಿಯ ಉದ್ದಕ್ಕೂ ಗುಂಡಿಗಳು ಉದ್ಭವವಾಗಿ ವಾಹನ ಸವಾರರು ಪರದಾಡುವಂತಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಅವರು, ಡಾಮರೀಕರಣ ರಸ್ತೆಯ ಪರಿಧಿ ಎತ್ತರ ಸ್ಥಿತಿಯಲ್ಲಿದ್ದು ದ್ವಿಚಕ್ರವಾಹನಗಳು ನಿಯಂತ್ರಣ ಸಿಗದೆ ಎಡವಿ ಬಿದ್ದಿರುವ ಘಟನೆಗಳು, ಸವಾರರು ಗಾಯಾಳಾಗಿವ ಪ್ರಕರಣಗಳು ಇಲ್ಲಿ ಸಂಭವಿಸಿವೆ. ರಸ್ತೆಯ ಗುಂಡಿಗಳು ಮೃತ್ಯುಕೂಪಗಳಾಗಿವೆ. ಇಲ್ಲಿ ಹೆದ್ದಾರಿಯ ಚರಂಡಿ ಕೊರೆತವು ಉಂಟಾಗಿದ್ದು ಹೆದ್ದಾರಿ ಕುಸಿಯುವ ಹಂತದಲ್ಲಿದೆ. ಕೂಡಲೇ ಜಿಲ್ಲಾಡಳಿತ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಸಮಸ್ಯೆಯನ್ನು ಪರಿಹರಿಸಬೇಕೆಂದು ಆಗ್ರಹಿಸಿದ್ದಾರೆ.