ಕಡಬ,ಮಾ 09 (DaijiworldNews/ AK): ಉಪ್ಪಿನಂಗಡಿಯಿಂದ ಕಡಬ ಮೂಲಕ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ ಬಸ್ ನಲ್ಲಿ ನಿಗದಿತ ಸ್ಥಳದಲ್ಲಿ ನಿಲ್ಲಿಸದೆ ಯುವತಿಯ ಜೊತೆ ಅನುಚಿತ ವರ್ತನೆ ತೋರಿದ ಅರೋಪದಲ್ಲಿ ಬಸ್ ನಿರ್ವಾಹಕನ್ನು ಕಡಬ ಪೊಲೀಸರು ವಶಕ್ಕೆ ಪಡೆದ ಘಟನೆ ಮಾ.9 ರಂದು ನಡೆದಿದೆ.
ಕಡಬ ತಾಲೂಕು ರಾಮಕುಂಜ ಸಮೀಪದ ಕುಂಡಾಜೆ ಎಂಬ ಪ್ರದೇಶದಿಂದ ಯುವತಿ ಬಸ್ ಏರಿದ್ದರು. ಆಲಂಕಾರಿಗೆ ಎಂದು ಯುವತಿ ಹೇಳಿದರೂ ಕಡಬಕ್ಕೆ ಟಿಕೆಟ್ ನೀಡಿ ಯುವತಿ ಹೇಳಿದ ಸ್ಥಳದಲ್ಲಿ ನಿಲ್ಲಿಸದೆ ಕಡಬದತ್ತ ಬಸ್ ಹೊರಟಿತ್ತು ಎನ್ನಲಾಗಿದೆ.
ತಾನು ಇಳಿಯುವ ಸ್ಥಳ ಬಂದಾಗ ಮೈಮುಟ್ಟಿ ಇಲ್ಲಿ ಇಳಿಯಬೇಡಿ ಎಂದು ನಿರ್ವಾಹಕ ಸೂಚಿಸಿದ್ದ ಎಂದು ಆರೋಪಿಸಲಾಗಿದೆ. ಬಸ್ ನಿಲ್ಲಿಸದೆ ಅನುಚಿತ ವರ್ತನೆ ತೋರಿದ ಬಗ್ಗೆ ಯುವತಿ ಪರಿಚಿತರಿಗೆ ಮಾಹಿತಿ ನೀಡಿದ ಹಿನ್ನೆಲೆ ಕಡಬ ಸಮೀಪದ ಕಳಾರ ಮಸೀದಿ ಬಳಿ ಬಸ್ ನ್ನು ಭೀಮ್ ಆರ್ಮಿ ಸಂಘಟನೆಯ ಸದಸ್ಯರು ತಡೆದು ನಿಲ್ಲಿಸಿದ್ದರು. ಬಳಿಕ ಠಾಣೆ ಬಳಿ ನಿಲ್ಲಿಸಲು ಸೂಚಿಸಿದ್ದರು.
ಆಲಂಕಾರಿನಲ್ಲಿ ಇಳಿಯುವ ವೇಳೆ ತನ್ನ ಮೈ ಮುಟ್ಟಿ ಇಲ್ಲಿ ಇಳಿಯಬೇಡಿ ಎಂದು ಒತ್ತಾಯ ಪೂರ್ವಕವಾಗಿ ಕಡಬದತ್ತ ಕರೆದುಕೊಂಡು ಬಂದಿರುವುದಾಗಿ ಯುವತಿ KA 21F3276 ಬಸ್ಸಿನ ನಿರ್ವಾಹಕನ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಠಾಣೆಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಮುಂದೆಕ್ಕೆ ತೆರಳಲು ಪೊಲೀಸರು ಪರ್ಯಾಯವಾಗಿ ಬೇರೆ ಬಸ್ಸಿನ ವ್ಯವಸ್ಥೆ ಕಲ್ಪಿಸಿ ನಿರ್ವಾಹಕನ್ನು ಠಾಣೆಗೆ ಕರೆದೊಯ್ದಿದ್ದಾರೆ. ನಂತರದ ಬಸ್ ನಿರ್ವಾಹಕ ಜೊತೆ ಮುಚ್ಚಳಿಕೆ ಬರೆಸಿ ಮುಂದೆ ಪ್ರಯಾಣಿಕರ ಜೊತೆ ಸಭ್ಯತೆಯಿಂದ ವರ್ತಿಸುವಂತೆ ಎಚ್ಚರಿಕೆ ನೀಡಿರುವುದಾಗಿ ತಿಳಿದು ಬಂದಿದೆ.