ಮಂಗಳೂರು, ಮಾ08 (DaijiworldNews/MS): ಕರಾವಳಿಯಾದ್ಯಂತ ಮಹಾಶಿವರಾತ್ರಿಯನ್ನು ಶುಕ್ರವಾರ ಶ್ರದ್ಧಾಭಕ್ತಿಯಿಂದ ಆಚರಿಸಲಾಗುತ್ತಿದೆ.
ಜಿಲ್ಲೆಯ ವಿವಿಧ ಶಿವ ದೇವಸ್ಥಾನಗಳಲ್ಲಿ ಇಂದು ಬೆಳಗ್ಗಿನಿಂದಲೇ ವಿವಿಧ ಧಾರ್ಮಿಕ ಪೂಜಾ ವಿಧಿಗಳು ಆರಂಭಗೊಂಡಿತ್ತು. ಮುಂಜಾನೆಯಿಂದಲೇ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ದರ್ಶನ ಪಡೆಯುತ್ತಿದ್ದಾರೆ. ಬೆಳಗ್ಗಿನಿಂದಲೇ ಶಿವನಿಗೆ ರುದ್ರಾಭಿಷೇಕ, ವಿಶೇಷ ಪೂಜೆ, ಅರ್ಚನೆಗಳು ನಡೆಯುತ್ತಿದೆ.
ಮಂಗಳೂರಿನ ಕದ್ರಿ ಶ್ರೀ ಮಂಜುನಾಥ ದೇವಸ್ಥಾನ, ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ, ಕುಡುಪು ಶ್ರೀ ಅನಂತ ಪದ್ಮನಾಭ, ಶ್ರೀ ಮಂಗಳಾದೇವಿ ಕ್ಷೇತ್ರ, ಶರವು ಶ್ರೀ ಮಹಾಗಣಪತಿ ದೇವಸ್ಥಾನ, ಕಾವೂರು ಶ್ರೀ ಮಹಾಲಿಂಗೇಶ್ವರ ದೇಗುಲ, ಪಾಂಡೇಶ್ವರ ಮಹಾಲಿಂಗೇಶ್ವರ ದೇವಸ್ಥಾನ ಸೇರಿದಂತೆ ನಗರದ ವಿವಿಧ ದೇವಳಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತಿದೆ. ನರಹರಿ ಪರ್ವತ ಕ್ಷೇತ್ರ, ಬಂಟ್ವಾಳ ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ವಿಶೇಷ ಪೂಜೆಗಳು ನಡೆದು ಧಾರ್ಮಿಕ ಕಾರ್ಯಕ್ರಮ, ಭಜನೆ, ಜಾಗರಣೆ ನಡೆಯುತ್ತಿದೆ. ಶಿವರಾತ್ರಿ ವಿಶೇಷವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಇಂದು ರಾತ್ರಿಯಿಂದ ಮುಂಜಾನೆಯವರೆಗೆ ಭಕ್ತರಿಂದ ಶಿವನಾಮ ಸ್ಮರಣೆ, ಭಜನೆ, ಪ್ರಾರ್ಥನೆ, ಧ್ಯಾನದೊಂದಿಗೆ ಜಾಗರಣೆ ನಡೆಯಲಿದೆ. ದೇವರ ದರ್ಶನಕ್ಕಾಗಿ ವಿವಿಧೆಡೆಗಳಲ್ಲಿ ಕಾಲ್ನಡಿಗೆಯಲ್ಲೇ ಭಕ್ತರು ಧರ್ಮಸ್ಥಳ ಕ್ಷೇತ್ರಕ್ಕೆ ಆಗಮಿಸಲಿದ್ದಾರೆ. ದೇವಸ್ಥಾನಗಳಲ್ಲಿ ಮಾತ್ರವಲ್ಲದೆ, ಶಿವಭಕ್ತರು ಶಿವರಾತ್ರಿಯಂದು ಉಪವಾಸವಿದ್ದು ತಮ್ಮ ಮನೆಗಳಲ್ಲಿಯೂ ಆಚರಣೆ, ಶಿವನಿಗೆ ವಿಶೇಷ ಪೂಜೆ ನಡೆಸುತ್ತಾರೆ