ಕಾಸರಗೋಡು, ಮಾ 08 (DaijiworldNews/MS): ಮೀಯಪದವು ಮದಲಕಟ್ಟೆಯ ಯುವಕ ಆರೀಫ್ (22) ಮೃತಪಟ್ಟಿರುವುದು ಕೊಲೆಯಿಂದ ಎಂದು ಸಾಬೀತಾಗಿದ್ದು , ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಹೋದರಿ ಪತಿ ಸೇರಿದಂತೆ ಮೂವರನ್ನು ಮಂಜೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಆರು ಮಂದಿಗಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಕುಂಜತ್ತೂರಿನ ರಶೀದ್(29), ಮಂಜೇಶ್ವರ ಕಣ್ವತೀರ್ಥದ ಸಿದ್ದೀಕ್ ಮತ್ತು ಶೌಖತ್ ಬಂಧಿತರು. ಭಾನುವಾರ ಸಂಜೆ ಮೀಯಪದವು ಸಮೀಪ ಘಟನೆ ನಡೆದಿತ್ತು.
ಗಾಂಜಾ ಸೇವಿಸಿ ತಂಡವೊಂದು ದಾಂಧಲೆ ನಡೆಸುತ್ತಿರುವುದಾಗಿ ಲಭಿಸಿದ ಮಾಹಿತಿ ಯಂತೆ ಸ್ಥಳಕ್ಕೆ ತಲಪಿದ ಪೊಲೀಸರು ಆರೀಫ್ ನನ್ನು ವಶಕ್ಕೆ ಪಡೆದುಕೊಂಡಿದ್ದರು. ಅಂದು ರಾತ್ರಿ ರಶೀದ್ ಹಾಗೂ ಸಂಬಂಧಿಕರ ಜೊತೆ ಜಾಮೀನನಲ್ಲಿ ಬಿಡುಗಡೆಗೊಳಿಸಲಾಗಿತ್ತು. ರಶೀದ್ ನ ಸ್ಕೂಟರ್ ನಲ್ಲಿ ಆರೀಫ್ ತೆರಳುತ್ತಿದ್ದಾಗ ಇಬ್ಬರು ತಡೆದು ಬಳಿಕ ಏಳು ಮಂದಿಯ ತಂಡವು ಆರೀಫ್ ನ ಮೇಲೆ ಹಲ್ಲೆ ನಡೆಸಿತ್ತು. ಬಳಿಕ ತಡರಾತ್ರಿ ಮನೆಗೆ ತಂದು ಬಿಡಲಾಗಿತ್ತು. ಗಂಭೀರ ಸ್ಥಿತಿಯಲ್ಲಿದ್ದ ಆರೀಫ್ ನನ್ನು ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ದು ದಾಖಲಿಸಲಾಗಿತ್ತು. ಆದರೆ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟದನು.
ಆರಂಭದಲ್ಲಿ ಸ್ಕೂಟರ್ ನಲ್ಲಿ ಸಂಚರಿಸುವ ಸಂದರ್ಭದಲ್ಲಿ ಗಾಯಗೊಂಡಿರುವುದಾಗಿ ಹೇಳಿಕೆ ನೀಡಲಾಗಿತ್ತು .ಆದರೆ ತನಿಖೆ ನಡೆಸಿದಾಗ ಯುವಕನನ್ನು ಥಳಿಸಲಾಗಿತ್ತು ಎಂದು ಬಯಲಿಗೆ ಬಂದಿದೆ. ಮರಣೋತ್ತರ ಪರೀಕ್ಷೆಯಿಂದ ದೇಹದದಲ್ಲಿ ಗಾಯಗಳು ಕಂಡುಬಂದಿದ್ದು , ಇದರಿಂದ ಕೊಲೆ ಎಂಬುದು ಸಾಬೀತಾಗಿದ್ದು , ಆರೋಪಿಗಳನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಿದಾಗ ಕೃತ್ಯ ಬೆಳಕಿಗೆ ಬಂದಿದೆ. ಆದರೆ ಯುವಕನ ಮೇಲೆ ಹಲ್ಲೆ ನಡೆಸಲು ಕಾರಣ ಏನೆಂಬುದರ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ