ಮಂಗಳೂರು, ಮಾ 07 (DaijiworldNews/AK): ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳಾದ “ಶಕ್ತಿ, ಅನ್ನಭಾಗ್ಯ, ಗೃಹಜ್ಯೋತಿ, ಗೃಹಲಕ್ಷ್ಮೀ, ಯುವನಿಧಿ ಯೋಜನೆಗಳ ಹಾಗೂ ಇತರ ಯೋಜನೆಗಳು, ಕಾರ್ಯಕ್ರಮಗಳನ್ನು ಜನರಿಗೆ ಮತ್ತಷ್ಟು ತಲುಪಿಸುವ ಉದ್ದೇಶದಿಂದ ಬೆಂಗಳೂರಿನ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ “ಕಲಾಜಾಥ” ಸಂಚಾರಿ ಪ್ರದರ್ಶನ ನೀಡುವ ಸಂಚಾರಿ ವಾಹನಕ್ಕೆ ಮಾ.7ರ ಗುರುವಾರ ನಗರದ ಕರಾವಳಿ ಮೈದಾನದಲ್ಲಿ ವಿಧಾನ ಪರಿಷತ್ ಶಾಸಕರಾದ ಹರೀಶ್ ಕುಮಾರ್ ಹಾಗೂ ಡಾ. ಮಂಜುನಾಥ್ ಭಂಡಾರಿ ಅವರು ಚಾಲನೆ ನೀಡಿದರು.
ಈ ಕಲಾಜಾಥಾ ಸಂಚಾರಿ ವಾಹನವು ಜಿಲ್ಲೆಯಾದ್ಯಂತ ಮುಂದಿನ 15 ದಿನಗಳ ಕಾಲ 45 ಗ್ರಾಮಗಳಲ್ಲಿ ಸಂಚರಿಸಿ, ಸರ್ಕಾರದ ಯೋಜನೆಗಳ ಮಹತ್ವದ ಬಗ್ಗೆ ಹಾಗೂ ಯೋಜನೆಗಳ ಫಲಾನುಭವಿಗಳ ಬಗ್ಗೆ ಎಲ್.ಇ.ಡಿ ಪರದೆಗಳಲ್ಲಿ ವಿಡಿಯೋ ಬಿತ್ತರಿಸುವ ಮೂಲಕ ಹಾಗೂ ಕಲಾತಂಡಗಳಿಂದ ಬೀದಿ ನಾಟಕ ಪ್ರದರ್ಶನ ಮಾಡುವ ಮೂಲಕ ವ್ಯಾಪಕ ಪ್ರಚಾರ ಮಾಡಲಿದೆ.
ಈ ಪ್ರದರ್ಶನ ಕಾರ್ಯಕ್ರಮದ ಸದುಪಯೋಗವನ್ನು ಜಿಲ್ಲೆಯ ಜನರು ಪಡೆದುಕೊಳ್ಳಬಹುದಾಗಿದೆ. ಈ ವರೆಗೆ ಜಿಲ್ಲೆಯಲ್ಲಿ ಗ್ಯಾರಂಟಿ ಯೋಜನೆಗಳಿಂದ ವಂಚಿತರಾಗಿದ್ದರೆ ಜಾಗೃತಿ ಹೊಂದಿ ಸಂಬಂಧಪಟ್ಟ ಸಕ್ಷಮದವರನ್ನು ಸಂಪರ್ಕಿಸುವ ಮೂಲಕ ಹಾಗೂ ಸೇವಾ ಸಿಂದೂ ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸುವ ಮೂಲಕ ಯೋಜನೆಗಳ ಫಲಾನುಭವವನ್ನು ಪಡೆಯಬಹುದಾಗಿದೆ.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್, ಮೂಡದ ನೂತನ ಅಧ್ಯಕ್ಷರಾದ ಸದಾಶಿವ ಉಳ್ಳಾಲ್, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮಮತಾ ಗಟ್ಟಿ, ಮೆಸ್ಕಾಂ ಎಂ.ಡಿ. ಪದ್ಮಾವತಿ, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರಾದ ಆನಂದ್, ಮಂಗಳೂರು ತಹಶೀಲ್ದಾರರಾದ ಪ್ರಶಾಂತ್ ವಿ ಪಾಟೀಲ್,ವಿವಿಧ ಇಲಾಖೆಯ ಅಧಿಕಾರಿಗಳು, ಜನಪ್ರತಿನಿಧಿಗಳು, ಕರಾವಳಿ ಜಾನಪದ ಕಲಾತಂಡದ ನಾಯಕ ಗಿರೀಶ್ ನಾವಡ ಹಾಗೂ ತಂಡದವರು, ಸಾರ್ವಜನಿಕರು, ಫಲಾನುಭವಿಗಳು ಇದ್ದರು.