ಮಂಗಳೂರು, ಮಾ 06(DaijiworldNews/SK): ಇದೇ ಮಾರ್ಚ್ 25 ರಿಂದ ಏಪ್ರಿಲ್ 6ರ ವರೆಗೆ ರಾಜ್ಯದ್ಯಂತ ನಡೆಯಲಿರುವ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಜಿಲ್ಲೆಯ ವಿದ್ಯಾರ್ಥಿಗಳು ಶೇ. ನೂರರಷ್ಟು ಶ್ರಮವಹಿಸಿ ಓದುವ ಮೂಲಕ ಹೆಚ್ಚು ಅಂಕಗಳಿಸಿ ಚಾಂಪಿಯನ್ ಗಳಾಗುವಂತೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಅವರು ಕರೆ ನೀಡಿದರು.
ಅವರು ಈ ಬಾರಿ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯುತ್ತಿರುವ ಜಿಲ್ಲೆಯ ಎಲ್ಲಾ ಶಾಲೆಗಳ ವಿದ್ಯಾರ್ಥಿಗಳೊಂದಿಗೆ ಮಾರ್ಚ್ 6ರಂದು ಬುಧವಾರ ತಮ್ಮ ಕಚೇರಿಯಿಂದ ವಿಡಿಯೋ ಸಂವಾದ ನಡೆಸಿ ಶುಭ ಹಾರೈಸಿದರು.
ಎಸ್ ಎಸ್ ಎಲ್ ಸಿಯಂತಹ ಮಹತ್ವದ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳು ಉತ್ತಮ ಮನಸ್ಥಿತಿಯನ್ನಿಟ್ಟುಕೊಳ್ಳಬೇಕು, ಇದೇ ಮೊದಲ ಬಾರಿಗೆ ನಿಮ್ಮ ಶಾಲೆ ದಾಟಿ ನಿಮ್ಮನ್ನು ನೀವೇ ಗುರುತಿಸಿಕೊಳ್ಳುವ ಪರೀಕ್ಷೆಯನ್ನು ಎದುರಿಸಲು ಸಜ್ಜಾಗುತ್ತಿದ್ದೀರಿ, ಆ ಗುರಿಯನ್ನು ಸಾಧಿಸಲು ಮಾನಸಿಕ ಸ್ಥಿತಿ ಉತ್ತಮವಿರಬೇಕು, ಶಿಸ್ತು, ಆತ್ಮವಿಶ್ವಾಸ ಅತ್ಯಂತ ಮುಖ್ಯ. ಯಾವುದೇ ಕಾರಣಕ್ಕೂ ಇವುಗಳಿಂದ ವಿಚಲಿತರಾಗಬಾರದು, ಮನಸಿಟ್ಟು ಓದಿದರೆ, ಶಿಸ್ತಿನ ಸಮಯ ಪಾಲನೆಯಿಂದ ಹೆಚ್ಚು ಅಂಕ ಗಳಿಸಲು ಸಾಧ್ಯವಾಗುವುದು, ಅದಕ್ಕಾಗಿ ಒಂದು ಕ್ಷಣ ಯೋಚಿಸಬೇಕು, ನಾನು ಯಾರು ಮತ್ತು ಏನನ್ನು ಎದುರಿಸಲು ಹೊರಟಿದ್ದೇನೆ ಎಂಬುದನ್ನು, ಅರಿತುಕೊಳ್ಳಬೇಕು, ಪರೀಕ್ಷೆ ಎದುರಿಸಲಿರುವ ಜಿಲ್ಲೆಯ ಎಲ್ಲಾ ಎಸ್ ಎಸ್ ಎಲ್ ಸಿ ಮಕ್ಕಳು ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸುವ ಮೂಲಕ ಚಾಂಪಿಯನ್ ಗಳಾಗಿ ಹೊರ ಹೊಮ್ಮಬೇಕು ಎಂದು ಹೇಳಿದರು.
ಉತ್ತಮ ಮನಸ್ಥಿತಿ ಹೊಂದಿದ ಗೆಲ್ಲುವವರು, ಮೈದಾನದಲ್ಲೂ ವಿಜೇತರಾಗುವರುತ್ತಾರೆ. ಆತ್ಮವಿಶ್ವಾಸದಿಂದ ನನ್ನಲ್ಲಿ ಆಗಬಹುದು, ನಾನು ಮಾಡಿತೋರಿಸಬಲ್ಲೆ ಎಂಬ ಛಲದಿಂದ ಪರೀಕ್ಷೆ ಬರೆದು ಹೊರ ಬರಬೇಕು ಎಂದರು.
ನಿಮ್ಮಲ್ಲಿ ಉತ್ತಮ ಸಕಾರಾತ್ಮಕ ಅಂಶವಿರಬೇಕು ಯಾವುದೇ ರೀತಿಯ ಆತಂಕ, ವಿಷಾದಭಾವ ಮೂಡದಂತೆ ಎಚ್ಚರ ವಹಿಸಬೇಕು, ಎಸ್ ಎಸ್ ಎಲ್ ಸಿ ಪತ್ರಿಕೆಯ ಮೂಲಕ ನಿಮ್ಮ ತಾಕತ್ತು ಹೊರ ಜಗತ್ತಿಗೆ ತಿಳಿಯುವುದು, ಅದಕ್ಕಾಗಿ ಶೇಖಡ ನೂರರಷ್ಟು ಶ್ರಮ ಹಾಕಿದ್ದಲ್ಲಿ ಅದನ್ನು ಸಾಧಿಸಬಹುದು ಎಂದು ತಿಳಿದು ಓದಿರಿ ಎಂದವರು ಹೇಳಿದರು.