ಉಡುಪಿ,ಮಾ06(DaijiworldNews/AK): ಉಡುಪಿಯಲ್ಲಿ ಹಲವಾರು ವರ್ಷಗಳಿಂದ ನಿರಂತರವಾಗಿ ನಿಸ್ವಾರ್ಥದಿಂದ ಸಮಾಜ ಸೇವೆ ಮಾಡುತ್ತಿರುವ ಈಶ್ವರ್ ಮಲ್ಪೆ ಮತ್ತು ರವಿ ಕಟಪಾಡಿ ಅವರನ್ನು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀ ಪಾದರು ಅಯೋಧ್ಯಾ ಮಂಡಲೋತ್ಸವ ಪುರಸ್ಕಾರದ ಮೂಲಕ ಶ್ರೇಷ್ಠ ಗೌರವ ನೀಡಿರುವುದು ಉಡುಪಿಗೆ ಹೆಮ್ಮೆಯ ವಿಚಾರ.
ಪೇಜಾವರ ಶ್ರೀಗಳು ರಾಮ ರಾಜ್ಯದ ಪರಿಕಲ್ಪನೆಯಲ್ಲಿ ದೀನ ದಲಿತರ, ಅನಾಥ ಜನರ, ಆರ್ಥಿಕವಾಗಿ ಹಿಂದುಳಿದವರಿಗೆ ತಮ್ಮ ಊರಿನಲ್ಲಿ ಸಹಾಯ ಹಸ್ತ ನೀಡಿದವರಿಗೆ ಅಯೋಧ್ಯೆಯ ಪ್ರಭು ಶ್ರೀ ರಾಮಚಂದ್ರ ದೇವರಿಗೆ 48 ದಿನಗಳ ಕಾಲ ನಡೆಯುವ ಮಂಡಲೋತ್ಸವದಲ್ಲಿ ಕಲಶ ಸೇವೆಯನ್ನು ಪ್ರಾಯೋಜಿಸುವ ಅವಕಾಶ ಕಲ್ಪಿಸಿದ್ದಾರೆ.
ಅದರಂತೆ ಸಾಮಾಜಿಕ ಸೇವೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಉಡುಪಿಯ ಈಶ್ವರ್ ಮಲ್ಪೆ ಮತ್ತು ರವಿ ಕಟಪಾಡಿ ಇವರ ಸೇವೆಯನ್ನು ಗುರುತಿಸಿ ಅಯೋಧ್ಯೆಯ ಶ್ರೀರಾಮ ದೇವರ ಮಂಡಲೋತ್ಸವದಲ್ಲಿ ಶ್ರೀರಾಮ ದೇವರಿಗೆ ಅಭಿಷೇಕ ಮಾಡಿದ ರಜತ ಕಲಶವನ್ನು ನೀಡಿ ಗೌರವಿಸಿದರು.
ಅಲ್ಲದೇ ಸಂಜೆ ನಡೆದ ಪಲ್ಲಕ್ಕಿ ಉತ್ಸವದಲ್ಲೂ ಇಬ್ಬರಿಗೂ ಶ್ರೀರಾಮದೇವರ ಪ್ರಸಾದ ನೀಡಿ ಇಬ್ಬರೂ ನಡೆಸಿದ ಲೋಕೋತ್ತರ ಕಾರ್ಯವನ್ನು ಮನಸಾ ಕೊಂಡಾಡಿದರು .
ಈ ಸಂದರ್ಭ ಮಾಜಿ ಶಾಸಕ ಕೆ ರಘುಪತಿ ಭಟ್ , ಶ್ರೀಗಳ ಆಪ್ತರಾದ ವಿಷ್ಣು ಆಚಾರ್ಯ , ಕೃಷ್ಣ ಭಟ್ ಶ್ರೀನಿವಾಸ ಪ್ರಸಾದ್ ಮೈಸೂರು , ವಾಸುದೇವ ಭಟ್ ಪೆರಂಪಳ್ಳಿ , ಮಾಜಿ ನಗರಸಭಾ ಸದಸ್ಯ ಮಹೇಶ್ ಠಾಕೂರ್ , ಸುವರ್ಧನ್ ನಾಯಕ್ , ಉಪಸ್ಥಿತರಿದ್ದರು.