ಬಂಟ್ವಾಳ, ಮಾ 06 (DaijiworldNews/MS): ಮತದಾನ ಜಾಗೃತಿಯ ಕುರಿತಂತೆ ಬಂಟ್ವಾಳದ ಪುಟ್ಟ ಬಾಲಕಿಯೊಬ್ಬಳು ಬರೆದ ಪತ್ರಕ್ಕೆ ರಾಜ್ಯ ಚುನಾವಣಾ ಆಯೋಗದ ಮುಖ್ಯ ಚುನಾವಣಾಧಿಕಾರಿ ಸ್ಪಂದಿಸಿದ್ದು ಈ ಅಗತ್ಯ ಕ್ರಮಕೈಗೊಳ್ಳುವಂತೆ ದ.ಕ. ಜಿಲ್ಲಾಧಿಕಾರಿಗಳು ಹಾಗೂ ಜಿ.ಪಂ. ಸಿಇಒಗೆ ಆದೇಶ ನೀಡಿದ್ದಾರೆ.
ಮಾಣಿ ಪೆರಾಜೆ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ 4ನೇ ತರಗತಿ ವಿದ್ಯಾರ್ಥಿನಿ ಬಾಳ್ತಿಲ ಗ್ರಾಮದ ಕಶೆಕೋಡಿ ನಿವಾಸಿ ಸನ್ನಿಧಿ ಎಲ್.ಎಸ್. ಮತದಾನ ಜಾಗೃತಿಯ ಕುರಿತಂತೆ ಪತ್ರವನ್ನು ರಾಜ್ಯ ಚುನಾವಣೆ ಆಯೋಗಕ್ಕೆ ಪತ್ರವನ್ನು ಬರೆದಿದ್ದರು. ಇದಕ್ಕೆ ಪುರಸ್ಕರಿಸಿರುವ ಆಯೋಗ ಬಾಲಕಿಯ ಪ್ರಸ್ತಾವನೆಯನ್ನು ನಿಯಮಾನುಸಾರ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ದ.ಕ. ಜಿಲ್ಲಾಧಿಕಾರಿಗಳು ಹಾಗೂ ಜಿ.ಪಂ. ಸಿಇಒಗೆ ಆದೇಶಿಸಿದೆ.
ಬಾಲಕಿಯು ಕಳೆದ ವಿಧಾನಸಭಾ ಚುನಾವಣೆ ಸಂದರ್ಭ ತನ್ನ ಸ್ನೇಹಿತರ ಜತೆಗೂಡಿ ಬಾಳ್ತಿಲ ಭಾಗದಲ್ಲಿ ಮತದಾನದ ಕುರಿತು ಜಾಗೃತಿಯ ಕಾರ್ಯ ಮಾಡಿದ್ದು, ಈ ಬಾರಿ ಲೋಕಸಭಾ ಚುನಾವಣೆಯ ಸಂದರ್ಭ ಶೇ. 100 ಮತದಾನವಾಗುವ ನಿಟ್ಟಿನಲ್ಲಿ ಪ್ರತಿಯೊಬ್ಬರಲ್ಲೂ ಜಾಗೃತಿ ಮೂಡಿಸಲು ಅವಕಾಶ ನೀಡಬೇಕು ಈ ನಿಟ್ಟಿನಲ್ಲಿ ತಾವು ದ.ಕ. ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಬೇಕು ಎಂದು ಪತ್ರದಲ್ಲಿ ವಿವರಿಸಿದ್ದರು.
ಸನ್ನಿಧಿ ಅವರ ಪ್ರಸ್ತಾವನೆ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲು ಸಿಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಚುನಾವಣೆಗೆ)ಯ ಸರಕಾರದ ಅಧೀನ ಕಾರ್ಯದರ್ಶಿ ಮಧು ಎ.ಸಿ. ಅವರು ಪತ್ರ ಬರೆದು ಆದೇಶಿಸಿದ್ದಾರೆ. ರಾಜ್ಯ ಚುನಾವಣಾ ಆಯೋಗದಿಂದ ಶಹಬ್ಟಾಸ್ ಗಿರಿ ಪಡೆದಿರುವ ಸನ್ನಿಧಿ ಕಶೆಕೋಡಿ ಅವರನ್ನು ಮಂಗಳವಾರ ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸಮ್ಮಾನಿಸಿದರು. ಸನ್ನಿಧಿ ಜತೆ ಕೆಲಕಾಲ ಮಾತುಕತೆ ನಡೆಸಿ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಹೇಳಿದ್ದಾರೆ.