ಉಡುಪಿ,ಮಾ 05(DaijiworlNews/AK): ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ [ಮಾಹೆ]ಯ ಘಟಕವಾಗಿರುವ ಮಣಿಪಾಲ್ ಸ್ಕೂಲ್ ಆಫ್ ಲೈಫ್ ಸಾಯನ್ಸಸ್ [ಎಂಎಸ್ಎಲ್ಎಸ್] ‘ಪ್ರೊ ಜೆ. ವಿ. ಭಟ್ ಸ್ಮಾರಕ ವಾರ್ಷಿಕ ಉಪನ್ಯಾಸ’ವನ್ನು ಇತ್ತೀಚೆಗೆ ಆಯೋಜಿಸಿದ್ದು ಇದರಲ್ಲಿ ನವದೆಹಲಿಯ ವಲ್ಲಭಭಾಯಿ ಚೆಸ್ಟ್ ಇನ್ಸ್ಟಿಟ್ಯೂಟ್ನ ಡಾ. ಅನುರಾಧಾ ಚೌಧರಿ ಅವರು ಉಪನ್ಯಾಸವನ್ನು ನೀಡಿದರು.
ಸೂಕ್ಷ್ಮಜೀವವಿಜ್ಞಾನ [ಮೈಕ್ರೋಬಯಾಲಜಿ] ಸಂಶೋಧನ ಕ್ಷೇತ್ರದಲ್ಲಿ ಅಪೂರ್ವ ಕೊಡುಗೆಯನ್ನು ನೀಡಿದ ವಿಜ್ಞಾನಿ ಪ್ರೊ. ಜೆ. ವಿ. ಭಟ್ ಅವರ ಸ್ಮರಣಾರ್ಥ ಈ ವಾರ್ಷಿಕ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಈ ಸಂಶೋಧನಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ ಪ್ರಖ್ಯಾತ ಭಾರತೀಯ ವಿಜ್ಞಾನಿಗೆ ಅವರ ನೆನಪಾರ್ಥ ದತ್ತಿ ಪ್ರಶಸ್ತಿಯನ್ನು ನೀಡಲಾಗುತ್ತದೆ .
ಡಾ. ಟಿ.ಎಸ್. ಮುರಳಿ (ಪ್ರೊಫೆಸರ್, ಎಮ್ಎಸ್ಎಲ್ಎಸ್) ಸಭಿಕರನ್ನು ಸ್ವಾಗತಿಸಿದರು ಮತ್ತು ಈ ವಾರ್ಷಿಕ ದತ್ತಿ ಪ್ರಶಸ್ತಿಯ ಮೂಲವನ್ನು ವಿವರಿಸಿದರು. ಮಾಹೆಯ ಆರೋಗ್ಯ ವಿಜ್ಞಾನ ವಿಭಾಗದ ಸಹ ಉಪಕುಲಪತಿಗಳಾದ ಡಾ. ಶರತ್ ಕೆ. ರಾವ್ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಜೀವವಿಜ್ಞಾನ ಕ್ಷೇತ್ರದಲ್ಲಿ ಡಾ. ಜೆ. ವಿ. ಭಟ್ ಅವರ ಸಾಧನೆಯನ್ನು ಸ್ಮರಿಸಿಕೊಂಡರು.
‘ಡಾ. ಜೆ. ವಿ. ಭಟ್ ಅವರ ಹೆಸರಿನಲ್ಲಿ ಅವರ ಕುಟುಂಬದವರು, ಅಭಿಮಾನಿಗಳು ಮತ್ತು ವಿದ್ಯಾರ್ಥಿಗಳು ಸೇರಿ ದತ್ತಿನಿಧಿಯನ್ನು ಸ್ಥಾಪಿಸಿದ್ದು, ಬಯೋಟೆಕ್ನಾಲಜಿ ಪದವಿಯನ್ನು ಪೂರ್ಣಗೊಳಿಸಿದ ಅತ್ಯುತ್ತಮ ವಿದ್ಯಾರ್ಥಿಗೆ ಚಿನ್ನದ ಪದಕವನ್ನು ನೀಡಲಾಗುತ್ತದೆ. ಎಂಎಸ್ಎಲ್ಎಸ್ನ ಪ್ರಥಮ ವರ್ಷಾರ್ಧದಲ್ಲಿ ಅತ್ಯುತ್ತಮ ಅಂಕ ಗಳಿಸಿದ ವಿದ್ಯಾರ್ಥಿಗೆ ನಗದು ಬಹುಮಾನ ಮತ್ತು ಪ್ರಮಾಣಪತ್ರವನ್ನು ವಿತರಿಸಲಾಗುತ್ತದೆ‘ ಎಂದರು.
ಸೂಕ್ಷ್ಮ ಜೀವವಿಜ್ಞಾನ ಕ್ಷೇತ್ರದಲ್ಲಿ ಪ್ರೊ.ಜೆ.ವಿ.ಭಟ್ ಅವರು ನಡೆಸಿದ ಬೃಹತ್ ಮತ್ತು ವಿಮರ್ಶಾತ್ಮಕ ಸಂಶೋಧನೆಯ ಕುರಿತು ಅವರು ವಿವರಿಸಿದರು ಮತ್ತು ಅವರ ವೈಜ್ಞಾನಿಕ ಪ್ರಯಾಣವನ್ನು ಪುಸ್ತಕ ರೂಪದಲ್ಲಿ ಸಂಗ್ರಹಿಸಲು ಪ್ರಸ್ತಾಪಿಸಿದರು.
ಡಾ. ಗುರುಪ್ರಸಾದ್ ಕೆ.ಪಿ (ಸಹ ನಿರ್ದೇಶಕ-ಸಂಶೋಧನೆ, ಎಂಎಸ್ಎಲ್ಎಸ್) ಪ್ರಶಸ್ತಿ ವಿಜೇತರನ್ನು ಸಭಿಕರಿಗೆ ಪರಿಚಯಿಸಿದರು. ಶರತ್ ರಾವ್ ಅವರು ಪ್ರಶಸ್ತಿಯ ಭಾಗವಾಗಿ ಬೆಳ್ಳಿ ಫಲಕ ಮತ್ತು ಪ್ರಮಾಣಪತ್ರವನ್ನುವಿತರಿಸಿದರು.
ಡಾ. ಅನುರಾಧಾ ಚೌಧರಿ ಅವರು ತಮ್ಮ ವಿಶೇಷ ಉಪನ್ಯಾಸದಲ್ಲಿ ರೋಗಕಾರಕ ಶಿಲೀಂಧ್ರಗಳ ಬಗ್ಗೆ ಮಾತನಾಡಿದರು. ‘ರೋಗ ನಿರೋಧ ಔಷಧಿ ಕ್ಷೇತ್ರಕ್ಕೆ ಸವಾಲಾಗಿ ಜಗತ್ತಿನಲ್ಲೆಲ್ಲ ಶಿಲೀಂಧ್ರಗಳು ಹರಡುತ್ತಿದೆ. ಫಂಗಲ್ ಇನ್ಫೆಕ್ಷನ್ನಿಂದ ರೋಗ ನಿದಾನ ವಿಳಂಬವಾಗುತ್ತಿದೆ. ಸಾವಿನ ಸಂಖ್ಯೆಗಳು ಅಧಿಕವಾಗುತ್ತಿವೆ. ಕೋವಿಡ್-19 ರ ಸಮಯದಲ್ಲಿ ಫಂಗಲ್ ಇನ್ಫೆಕ್ಷನ್ನಿಂದ ಆದ ಅಪಾಯವನ್ನು ಗಂಭೀರವಾಗಿ ಗಮನಿಸಬೇಕಾಗಿದೆ. ಇತ್ತೀಚೆಗಿನ ದಿನಗಳಲ್ಲಿ ಕೃಷಿ ಮತ್ತು ಪಶುಪಾಲನ ಕ್ಷೇತ್ರದಲ್ಲಿಯೂ ಶಿಲೀಂಧ್ರ ಸೋಂಕಿನ ಅಪಾಯಗಳು ಕಾಣಿಸುತ್ತಿವೆ’ ಎಂದರು.
ಎಂಎಸ್ಎಲ್ಎಸ್ನ ನಿರ್ದೇಶಕರಾದ ಡಾ. ಬಿ. ಎಸ್. ಸತೀಶ್ ರಾವ್ ಉಪಸ್ಥಿತರಿದ್ದರು. ಎಂಎಸ್ಎಲ್ಎಸ್ನ ಶೈಕ್ಷಣಿಕ ವಿಭಾಗದ ಸಹ ನಿರ್ದೇಶಕ ಡಾ. ಪದ್ಮಲತಾ ಎಸ್. ರೆ ಧನ್ಯವಾದ ಸಮರ್ಪಿಸಿದರು.