ಉಡುಪಿ, ಮಾ 05(DaijiworlNews/AA): ಅಜ್ಜರಕಾಡು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ರಕ್ಷಿಸಿಡಲಾಗಿದ್ದ ಎರಡು ಪುರುಷ ಅಪರಿಚಿತ ಶವಗಳ ಅಂತ್ಯಸಂಸ್ಕಾರವನ್ನು ಬೀಡಿನಗುಡ್ಡೆಯ ಹಿಂದೂ ರುದ್ರಭೂಮಿಯಲ್ಲಿ ಮಾರ್ಚ್ 4 ರಂದು ಗೌರವಯುತವಾಗಿ ನಡೆಸಲಾಯಿತು.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅನಾಥಶವಗಳ ಅಂತ್ಯಸಂಸ್ಕಾರದ ನೇತೃತ್ವ ವಹಿಸಿದ್ದ ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಅವರು, ಉಡುಪಿ ನಗರಸಭೆಯ ಪೌರಾಯುಕ್ತ ರಾಯಪ್ಪ ಅವರು ಅನಾಥ ಶವಗಳ ಅಂತ್ಯಸಂಸ್ಕಾರ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದರು. ಜೊತೆಗೆ ಶವಗಳನ್ನು ಹೊತ್ತು ಸಾಗಿಸಲು ಕೈಜೋಡಿಸಿದರು. ಪೌರಾಯುಕ್ತರ ಮಾನವೀಯಪ್ರಜ್ಞೆ ಹೆಮ್ಮೆ ಅನಿಸಿತು. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿಯೂ ಪ್ರಶಂಸೆ ವ್ಯಕ್ತವಾಗಿದೆ ಎಂದು ಹೇಳಿದರು.
ಇನ್ನು ಖಾಸಗಿ ಸ್ಥಳದಲ್ಲಿ ವ್ಯಕ್ತಿಯೋರ್ವರ ಶವಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಅಪರಿಚಿತ ರೋಗಿಯೊಬ್ಬರು ಮೃತಪಟ್ಟಿದ್ದರು. ಇವರಿಬ್ಬರ ಶವವನ್ನು ಜಿಲ್ಲಾಸ್ಪತ್ರೆಯ ಶೀತಲೀಕೃತ ಶವರಕ್ಷಣಾ ಘಟಕದಲ್ಲಿ ರಕ್ಷಿಸಿಡಲಾಗಿತ್ತು.
ಖಾಸಗಿಯವರ ಸ್ಥಳದಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಶವ ಹಾಗೂ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟ ಅಪರಿಚಿತ ರೋಗಿಯ ಶವವನ್ನು ಜಿಲ್ಲಾಸ್ಪತ್ರೆಯ ಶೀತಲೀಕೃತ ಶವರಕ್ಷಣಾ ಘಟಕದಲ್ಲಿ ರಕ್ಷಿಸಿಡಲಾಗಿತ್ತು. ಮೃತರ ವಾರಸುದಾರರ ಬರುವಿಕೆಗಾಗಿ ಮಾಧ್ಯಮ ಪ್ರಕಟಣೆ ನೀಡಲಾಗಿತ್ತು. ಆದರೆ ಮೃತರ ವಾರಸುದಾರರು ಬಾರದೆ ಇರದ ಹಿನ್ನೆಲೆ, ಕಾನೂನು ಪ್ರಕ್ರಿಯೆಗಳು ನಡೆಸಿದ ಬಳಿಕ ಅಂತ್ಯಸಂಸ್ಕಾರವನ್ನು ನಡೆಸಲಾಯಿತು. ಉಡುಪಿ ನಗರ ಠಾಣೆಯ ಪೋಲಿಸರು ಕಾನೂನು ಪ್ರಕ್ರಿಯೆ ನಡೆಸಿದರು. ಜಿಲ್ಲಾಸ್ಪತ್ರೆ, ನಗರಸಭೆ ಅಂತ್ಯಸಂಸ್ಕಾರ ಕಾರ್ಯಕ್ಕೆ ಸಹಕಾರ ನೀಡಿತು. ವಿಕಾಸ್ ಶೆಟ್ಟಿ, ಪ್ರದೀಪ್ ಅಜ್ಜರಕಾಡು, ಸೋನಿ ಅಜ್ಜರಕಾಡು, ಫ್ಲವರ್ ವಿಷ್ಣು, ಅಣ್ಣಪ್ಪ ಪೂಜಾರಿ ಕರಂಬಳ್ಳಿ, ನೆರವಾದರು.