ಉಳ್ಳಾಲ, ಮಾ 05(DaijiworlNews/AA): ಕೊಂಡಾಣ ಕ್ಷೇತ್ರದಲ್ಲಿ ನಿರ್ಮಾಣ ಹಂತದ ಭಂಡಾರಮನೆಗೆ ದಾಳಿ ನಡೆದು ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆಯುಂಟಾಗಿದೆ. ಕ್ಷೇತ್ರಕ್ಕೆ ಭೇಟಿ ಕೊಟ್ಟು ಹಿಂದೂಗಳಿಗೆ ಸಾಂತ್ವನ ಹೇಳಬೇಕಾದ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕ್ಷೇತ್ರದ ಶಾಸಕರು ನಾಪತ್ತೆಯಾಗಿದ್ದಾರೆ. ಕಾಂಗ್ರೆಸ್ ಮುಖಂಡರು ಈವರೆಗೆ ಭೇಟಿ ಕೊಡದೇ ಇರುವುದು ಸಂಶಯಕ್ಕೆ ಎಡೆ ಮಾಡಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಮೋಹನ್ ರಾಜ್ ಕೆ.ಆರ್ ಹೇಳಿದರು.
ತೊಕ್ಕೊಟ್ಟುವಿನ ಉಳ್ಳಾಲ ಪ್ರೆಸ್ ಕ್ಲಬ್ ನಲ್ಲಿ ಆಯೋಜಿಸಿದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋಟೆಕಾರು ಗ್ರಾಮದ ಕೊಂಡಾಣ ದೈವಸ್ಥಾನದಲ್ಲಿ ನಡೆದಿರುಚ ಕೃತ್ಯವನ್ನು ಬಿಜೆಪಿ ತೀವ್ರ ರೀತಿಯಲ್ಲಿ ಖಂಡಿಸುತ್ತದೆ. ಕಾರ್ಣಿಕ ಕ್ಷೇತ್ರ ಕೊಂಡಾಣ, ಸಮಸ್ತ ಹಿಂದೂ ಬಾಂಧವರಿಗೆ ಭಕ್ತಿ, ಶಕ್ತಿ ಕೇಂದ್ರವಾಗಿದೆ. ನಿರ್ಮಾಣಹಂತದ ಭಂಡಾರಮನೆ ಒಡೆದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ಇಲಾಖೆ ಸಂಪೂರ್ಣ ತನಿಖೆ ನಡೆಸಿ, ಕೃತ್ಯದ ಹಿಂದಿರುವವರ ಸೂಕ್ತ ತನಿಖೆ ನಡೆಸಬೇಕು. ಕಾಂಗ್ರೆಸ್ ಸರಕಾರ ಬಂದ ನಂತರ ಹಿಂದೂಗಳ ಧಾರ್ಮಿಕ ಕೇಂದ್ರಗಳಿಗೆ ನಿರಂತರ ದಾಳಿಗಳು ನಡೆಯುತ್ತಿದೆ. ಕೊಂಡಾಣದಲ್ಲಿ ಪ್ರಕರಣ ನಡೆದು 3 ದಿನಗಳಾದರೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಕಾಣೆಯಾಗಿದ್ದಾರೆ. ಉಸ್ತುವಾರಿ ಸಚಿವರು ಎಷ್ಟು ಬಾರಿ ಜಿಲ್ಲೆಗೆ ಭೇಟಿ ನೀಡಿದ್ದಾರೆ ಅನ್ನೋದು ಗೊತ್ತಾಗುತ್ತಿಲ್ಲ. ಅವರನ್ನು ಹುಡುಕಿಕೊಂಡು ಬೆಂಗಳೂರಿಗೆ ಹೋಗಬೇಕಾದ ಅನಿವಾರ್ಯತೆ ಇದೆ. ನಾಪತ್ತೆಯಾಗಿರುವ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರನ್ನು ಹುಡುಕಿಕೊಡಬೇಕಿದೆ ಎಂದು ಲೇವಡಿ ಮಾಡಿದ್ದಾರೆ.
ಹಿಂದೂಗಳಿಗೆ ಕನಿಷ್ಠ ಸಾಂತ್ವನ ಹೇಳುವ ಕೆಲಸವನ್ನೂ ಮಾಡಿಲ್ಲ. ಕ್ಷೇತ್ರದ ಶಾಸಕ ಯು.ಟಿ ಖಾದರ್ ಕೂಡ ಇಂದಿನ ತನಕ ಸ್ಥಳಕ್ಕೆ ಭೇಟಿ ನೀಡಿಲ್ಲ. ಪತ್ರಿಕೆ ಹೇಳಿಕೆ ನೀಡಿ ಸಮಜಾಯಿಷಿ ನೀಡಿದ್ದಾರೆ. ಸಮಸ್ತ ಜನರ ಪರವಾಗಿ ನಿಲ್ಲಬೇಕಾದ ಶಾಸಕರು, ನೋವಿಗೆ ಸ್ಪಂದನೆ ಕೊಡುವ ಕೆಲಸವನ್ನು ಮಾಡದೇ ಪಲಾಯನ ಗೈಯ್ಯುವ ಕೆಲಸವನ್ನು ಮಾಡುತ್ತಿದ್ದಾರೆ. ಪ್ರಕರಣದಲ್ಲಿ ಕಾಂಗ್ರೆಸ್ ಕ್ಲೀನ್ ಚಿಟ್ ಕೊಡುವ ಕೆಲಸವನ್ನು ಕೊಡುವ ಪ್ರಯತ್ನ ಮಾಡುತ್ತಿದೆ. ಕಾಂಗ್ರೆಸ್ ನಾಯಕರು ಭೇಟಿ ಕೊಡದೇ ಇರುವುದು ಸಂಶಯಕ್ಕೆ ಎಡೆ ಮಾಡುತ್ತಿದೆ. ಕಾಂಗ್ರೆಸ್ ಬಂದ ಕ್ಷಣದಿಂದ, ಧಾರ್ಮಿಕ ಕ್ಷೇತ್ರ ಭದ್ರತೆಯಿಲ್ಲದ ಸ್ಥಿತಿಯಲ್ಲಿದೆ. ಪ್ರಕರಣದ ಕುರಿತು ಜಿಲ್ಲಾಧಿಕಾರಿ, ಧಾರ್ಮಿಕ ದತ್ತಿ ಇಲಾಖೆಗೆ ಗೊತ್ತಿದ್ದರೂ ಕ್ರಮ ಕೈಗೊಂಡಿಲ್ಲ. ಪ್ರಕರಣದ ವಿಚಾರದಲ್ಲಿ ಮುಡಾ ನಿಗಮ ಅಧ್ಯಕ್ಷ ಸದಾಶಿವ ಉಳ್ಳಾಲ್ ಗಟ್ಟಿ ಸಮಾಜವನ್ನು ಅವಮಾನಿಸುವ ಕೆಲಸ ಮಾಡಿದ್ದಾರೆ. ಸಮಾಜದ ಹೆಸರು ತೆಗೆಯುವುದು ಸರಿಯಲ್ಲ. ಕಾನೂನು ವ್ಯಾಪ್ತಿಯಲ್ಲಿ ಹೊರಬಂದರೂ ಆರೋಪಿಗಳಿಗೆ ದೈವದ ಕೊಡಿಯಡಿಯಲ್ಲೇ ತೀರ್ಮಾನ ಸಿಗಲಿದೆ ಎಂದರು.
ಈ ಸಂದರ್ಭ ಬಿಜೆಪಿಯ ಕ್ಷೇತ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಶೇಖರ್ ಕನೀರುತೋಟ, ಹಿಂದುಳಿದ ವರ್ಗಗಳ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ರವಿ ಸೋವೂರು ಉಪಸ್ಥಿತರಿದ್ದರು.