ಮಂಗಳೂರು, ಮಾ 05(DaijiworlNews/AA): ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆ್ಯಸಿಡ್ ದಾಳಿ ಸಂತ್ರಸ್ತ ವಿದ್ಯಾರ್ಥಿನಿಯರನ್ನು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಮಂಗಳವಾರ ಭೇಟಿ ನೀಡಿ ವಿದ್ಯಾರ್ಥಿನಿಯರಿಗೆ ಧೈರ್ಯ ತುಂಬಿದ್ದಾರೆ.
ಆಸ್ಪತ್ರೆಗೆ ಭೇಟಿ ನೀಡಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಆ್ಯಸಿಡ್ ದಾಳಿ ಸಂತ್ರಸ್ತ ವಿದ್ಯಾರ್ಥಿನಿಯರಿಗೆ ತಕ್ಷಣ ತಲಾ 4 ಲಕ್ಷ ರೂಪಾಯಿ ಚಿಕಿತ್ಸಾ ಪರಿಹಾರವಾಗಿ ಬಿಡುಗಡೆ ಮಾಡಲಾಗುತ್ತದೆ. ವಿದ್ಯಾರ್ಥಿನಿಯರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ಘಟನೆಯಲ್ಲಿ ಇಬ್ಬರು ವಿದ್ಯಾರ್ಥಿನಿಯರಿಗೆ ತೀವ್ರ ಗಾಯವಾಗಿದೆ. ಅವರಿಗೆ ವಾರದ ಬಳಿಕ ಪ್ಲಾಸ್ಟಿಕ್ ಸರ್ಜರಿ ಮಾಡುವುದಾಗಿ ವೈದ್ಯರು ತಿಳಿಸಿದ್ದಾರೆ. ಪ್ಲಾಸ್ಟಿಕ್ ಸರ್ಜರಿ ಗೆ 20 ಲಕ್ಷದ ವರೆಗೆ ಚಿಕಿತ್ಸಾ ಪರಿಹಾರವನ್ನು ಸರ್ಕಾರ ಭರಿಸಲಿದೆ" ಎಂದು ಭರವಸೆ ನೀಡಿದ್ದಾರೆ.
"ವೈದ್ಯರನ್ನು ಹಾಗೂ ಸಂತ್ರಸ್ತ ವಿದ್ಯಾರ್ಥಿನಿಯರ ಪೋಷಕರನ್ನು ನಾನು ಭೇಟಿ ಮಾಡಿದ್ದೇನೆ. ಆ ಮೂವರು ವಿದ್ಯಾರ್ಥಿನಿಯರು ಪರೀಕ್ಷೆಯ ಬಗ್ಗೆ ಆತಂಕಗೊಂಡು ವಿಚಾರಿಸುತ್ತಿದ್ದಾರೆ. ವಿದ್ಯಾರ್ಥಿನಿಯರ ವಿದ್ಯಾಭ್ಯಾಸಕ್ಕೆ ತೊಂದರೆ ಆಗದಂತೆ ವ್ಯವಸ್ಥೆ ಮಾಡುತ್ತೇವೆ. ಈ ಕುರಿತು ನಾನು ಶಿಕ್ಷಣ ಇಲಾಖೆಯ ಸಚಿವರೊಂದಿಗೆ ಚರ್ಚಿಸುತ್ತೇನೆ. ಸದ್ಯದ ಪರಿಸ್ಥಿತಿಯಲ್ಲಿ ವಿದ್ಯಾರ್ಥಿನಿಯರು ಸಂಪೂರ್ಣವಾಗಿ ಗುಣಮುಖರಾಗುವುದು ಬಹಳ ಮುಖ್ಯವಾಗಿದೆ. ಆರೋಪಿ ಆ್ಯಸಿಡ್ ನ್ನು ಪ್ಲಾಸ್ಟಿಕ್ ಬಾಟಲ್ ನಲ್ಲಿ ತಂದಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆ್ಯಸಿಡ್ ತೀವ್ರ ಪ್ರಮಾಣದ್ದು ಆಗಿದ್ದರೆ ದೊಡ್ಡ ಮಟ್ಟದ ಗಾಯವಾಗುತ್ತಿತ್ತು. ಎಲ್ಲಾ ವಿದ್ಯಾರ್ಥಿನಿಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿಸಿದ್ದಾರೆ.