ಉಡುಪಿ, ಮಾ 05 (DaijiworlNews/AA): "ನಾಸಿರ್ ಹುಸೇನ್ ರಾಜ್ಯಸಭೆ ಪ್ರವೇಶಿಸಿದ ನಂತರ ಗಂಡಾಂತರ ತರುವ ಸಾಧ್ಯತೆ ಇದೆ. ನಾಸಿರ್ ಹುಸೇನ್ ಸದಸ್ಯತ್ವ ರದ್ದು ಮಾಡುವ ಕ್ರಮ ಕೈಗೊಳ್ಳಬೇಕು" ಎಂದು ಉಡುಪಿ ಶಾಸಕ ಯಶಪಾಲ್ ಸುವರ್ಣ ಒತ್ತಾಯಿಸಿದ್ದಾರೆ.
ರಾಜ್ಯಸಭೆ ಚುನಾವಣೆ ವೇಳೆ ಪಾಕ್ ಪರ ಘೋಷಣೆ ಕೂಗಿದ್ದ ಮೂವರ ಬಂಧನದ ವಿಚಾರವಾಗಿ ಮಾತನಾಡಿದ ಅವರು"ನಾಸಿರ್ ಹುಸೇನ್ ದೇಶಕ್ಕೆ ಆಪತ್ತು ತರುವ ವ್ಯಕ್ತಿ. ರಾಜ್ಯಸಭೆ ಪ್ರವೇಶಿಸಿದ ನಂತರ ಗಂಡಾಂತರ ತರುವ ಸಾಧ್ಯತೆ ಇದೆ.ನಾಸಿರ್ ಹುಸೇನ್ ಸದಸ್ಯತ್ವ ರದ್ದು ಮಾಡುವ ಕ್ರಮ ಕೈಗೊಳ್ಳಬೇಕು" ಎಂದು ಆಗ್ರಹಿಸಿದ್ದಾರೆ.
ಬಂಧಿತರಾದ ಮೂರು ಜನರ ಹಿನ್ನೆಲೆಯನ್ನು ತನಿಖೆ ಮಾಡಬೇಕು. ಮೂವರ ಹಿಂದೆ ಯಾರಿದ್ದಾರೆ ಅವರ ಮೇಲೂ ಕ್ರಮ ಆಗಬೇಕು. ಇದು ಇಡೀ ದೇಶದ ಜನ ತಲೆತಗ್ಗಿಸುವ ಘಟನೆಯಾಗಿತ್ತು. ನಾಸಿರ್ ಹುಸೇನ್ ನ ಹಿನ್ನೆಲೆಯನ್ನು ಪರಿಶೀಲಿಸಬೇಕು. ಆರೋಪಿಗಳು ಯಾರ ಸಹಕಾರದಿಂದ ವಿಧಾನಸೌಧ ಪ್ರವೇಶಿಸಿದ್ದರು ಎಂದು ತನಿಖೆಯಾಗಬೇಕು. ಈ ಘಟನೆಯಲ್ಲಿ ಮಾಧ್ಯಮದವರನ್ನು ಅವಹೇಳನ ಮಾಡಲಾಯಿತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರಕ್ಕೆ ಈಗಾಗಲೇ ನಾವು ಆಗ್ರಹ ಮಾಡಿದ್ದೇವೆ. ಬಾಂಬ್ ಬ್ಲಾಸ್ಟ್ ಗೂ ಈ ಘೋಷಣೆಗೂ ನಂಟಿರುವ ಸಂಶಯವಿದೆ. ಕೇಂದ್ರ ಸರ್ಕಾರಕ್ಕೆ, ಹಿಂದುತ್ವಕ್ಕೆ ವಿರೋಧ ವ್ಯಕ್ತಪಡಿಸುವ ಹುನ್ನಾರ ನಡೆಯುತ್ತಿದೆ. ಹಿಂದುಗಳ ಮೃದು ಧೋರಣೆಯಿಂದ ಇಂತಹ ಕೃತ್ಯಗಳು ನಡೆಯುತ್ತಿದೆ. ಈ ಘಟನೆ ಬಗ್ಗೆ ಕಾಂಗ್ರೆಸ್ ನಾಯಕರು ನೀಡಿರುವ ಹೇಳಿಕೆ ಹಾಸ್ಯಸ್ಪದವಾಗಿದೆ. ಕಾಂಗ್ರೆಸ್ ನಾಯಕರು ತಮ್ಮ ಹೇಳಿಕೆಯನ್ನ ಪುನರ್ ಪರಿಶೀಲನೆ ಮಾಡಬೇಕು ಎಂದು ಕಿಡಿಕಾರಿದ್ದಾರೆ.
ಪ್ರತಿಭಟಿಸಿದ ಉಡುಪಿ ಕಾಂಗ್ರೆಸ್ ನಾಯಕರಿಗೆ ಮುಖಭಂಗ ಆಗಿದೆ. ಬುರ್ಖಾ ಹಾಕಿ ತಿರುಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಂಗ್ರೆಸ್ ಇಂಡಿಯಾ ಅಲ್ಲ ಕಾಂಗ್ರೆಸ್ ಮುಸ್ಲಿಂ ಎಂದು ಪಕ್ಷದ ಹೆಸರು ಬದಲಿಸಿಕೊಳ್ಳಲಿ. ಮುಸ್ಲಿಂ ಲೀಗ್ ಜೊತೆ ನೀವು ಕೈಜೋಡಿಸುವುದು ಸೂಕ್ತ. ಭಾರತದ ಸಂಸ್ಕೃತಿ ಪರಂಪರೆ ಜೊತೆ ನೀವು ಉಳಿಯಲು ಅರ್ಹರಲ್ಲ. ನೀವು ಪಾಕಿಸ್ತಾನಕ್ಕೋ ಬಾಂಗ್ಲಾದೇಶಕ್ಕೋ ಹೋಗುವುದು ಸೂಕ್ತ ಎಂದು ವಾಗ್ದಾಳಿ ನಡೆಸಿದ್ದಾರೆ.