ಮಂಗಳೂರು, ಏ 29 (Daijiworld News/MSP): ನಗರದ ಕೊಡಿಯಾಲ್ ಗುತ್ತು ಸಮೀಪದ ವಸತಿ ಸಮುಚ್ಚಯದ ಎರಡನೇ ಮಹಡಿಯಿಂದ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಏ.28 ರ ಭಾನುವಾರ ಸಂಜೆ ನಡೆದಿದೆ.
ಕೊಡಿಯಾಲ್ಬೈಲ್ ನಿವಾಸಿ ರಾಜೇಶ್ ಶೆಣೈ (38) ಮೃತಪಟ್ಟವರು. ರಾಜೇಶ್ ಅವರ ಕುಟುಂಬ ಕೊಡಿಯಾಲ್ಗುತ್ತುವಿನಲ್ಲಿರುವ ಫ್ಲ್ಯಾಟ್ವೊಂದರ ಎರಡನೇ ಮಹಡಿಯಲ್ಲಿ ವಾಸಿಸುತ್ತಿತ್ತು.
ರಾಜೇಶ್ ಹಲವು ಸಮಯದಿಂದ ಅಪಸ್ಮಾರ ಕಾಯಿಲೆಯಿಂದ ಬಳಲುತ್ತಿದ್ದು, ಭಾನುವಾರ ಸಂಜೆ ತಿರುಗಾಡಲು ಫ್ಲ್ಯಾಟ್ನ ಹೊರಗಿರುವ ಓಪನ್ ಗ್ಯಾಲರಿಗೆ ಬಂದಾಗ ಏಕಾಏಕಿ ಪ್ರಜ್ಞೆ ತಪ್ಪಿ ಎರಡನೇ ಮಹಡಿಯಿಂದ ಕೆಳಗಿ ಬಿದ್ದಿದ್ದಾರೆ. ತಕ್ಷಣ ಸ್ಥಳೀಯರು ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ಸಾಗಿಸಿದರೂ ಪ್ರಯೋಜನವಾಗಲಿಲ್ಲ.
ಘಟನೆ ನಡೆಯುವ ವೇಳೆ ರಾಜೇಶ್ ಅವರ ತಾಯಿ ಮಾತ್ರ ಮನೆಯಲ್ಲಿದ್ದು, ಪತ್ನಿ ಮತ್ತು ಇಬ್ಬರು ಮಕ್ಕಳು ಹೊರಗಡೆ ಹೋಗಿದ್ದರು. ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.