ಉಳ್ಳಾಲ, ಮಾ 03(DaijiworldNews/AK): ಕೊಂಡಾಣ ನಿರ್ಮಾಣ ಹಂತದ ಭಂಡಾರ ಮನೆಯನ್ನು ದುಷ್ಕರ್ಮಿಗಳು ರಾತ್ರೋರಾತ್ರಿ ಜೆಸಿಬಿ ಮೂಲಕ ಧ್ವಂಸಗೊಳಿಸಿದ ಘಟನೆ ನಡೆದಿದೆ.
ಕೊಂಡಾಣ ಕ್ಷೇತ್ರದ ಪಿಲಿಚಾಮುಂಡಿ , ಬಂಟ, ವೈದ್ಯನಾಥ ದೇವಸ್ಥಾನಕ್ಕೆ ಸೇರಿದ ನೂತನವಾಗಿ ನಿರ್ಮಾಣ ಮಾಡಲಾಗುತ್ತಿದ್ದ ಭಂಡಾರ ಮನೆಯನ್ನು ಧ್ವಂಸಗೊಳಿಸಲಾಗಿದೆ. ದೈವಸ್ಥಾನದ ಆಡಳಿತ ಮಂಡಳಿ ವಿಚಾರವಾಗಿ ಎರಡು ಬಣಗಳ ಮಧ್ಯೆ ವಿವಾದ ಉಂಟಾಗಿ ಭಂಡಾರದ ಮನೆ ಧ್ವಂಸ ಮಾಡಿರುವ ಶಂಕೆ ವ್ಯಕ್ತವಾಗಿದೆ.ಸ್ಥಳಕ್ಕೆ ಕೋಟೆಕಾರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಆನಂದ್, ತಹಶೀಲ್ದಾರ್ ಪುಟ್ಟರಾಜು, ಎಸಿಪಿ ಧನ್ಯಾ ನಾಯಕ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆನಂದ್ ಅವರು ಠಾಣೆಗೆ ದೂರು ನೀಡಿದ್ದರು.
ದೂರಿನ ಆಧಾರದ ಮೇಲೆ, ಎಫ್ಐಆರ್ (ಸಿಆರ್ ಸಂಖ್ಯೆ: 43/24 ಯು/ಎಸ್ 143,147,148,295,427 ಆರ್/ಡಬ್ಲ್ಯೂ 149 ಐಪಿಸಿ ಮತ್ತು 2ಎ ಕೆಪಿಡಿಎಲ್ಪಿ ಕಾಯ್ದೆ) ದಾಖಲಿಸಲಾಗಿದೆ.
ತನಿಖೆ ನಡೆಸಿ ಮುತ್ತಣ್ಣ ಶೆಟ್ಟಿ, ಧೀರಜ್ ಮತ್ತು ಶಿವರಾಜ್ ಎಂಬುವರನ್ನು ಬಂಧಿಸಲಾಗಿದೆ. ತಾವೇ ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾರೆ.ಅವರು ಹಾಗೆ ಮಾಡಲು ಕಾರಣವೆಂದರೆ, ಈ ದೇವಾಲಯವು 16 ಗುರಿಕಾರರನ್ನು ಹೊಂದಿದೆ. ಅನಧಿಕೃತ ಮತ್ತು ಯಾವುದೇ ಅನುಮತಿಯಿಲ್ಲದೆ ನಿರ್ಮಿಸುತ್ತಿರುವ ಹೊಸ ಭಂಡಾರ್ ಮನೆಗೆ ಎಲ್ಲಾ ಗುರಿಕಾರರು ಒಪ್ಪಿಗೆ ನೀಡಲಿಲ್ಲ. ಈ ಬಗ್ಗೆ ಈಗಾಗಲೇ ಎಸಿ ಹಾಗೂ ತಶೀಲ್ದಾರ್ಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಕಟ್ಟಡವನ್ನು ತಾವೇ ಕೆಡವಲು ನಿರ್ಧರಿಸಿದ್ದಾರೆ.