ಉಪ್ಪಿನಂಗಡಿ,ಏ 29 (Daijiworld News/MSP): ಕೆಎಸ್ಆರ್ಟಿಸಿ ಬಸ್ನಲ್ಲಿ ಜೀವಂತ ಕೋಳಿ ಜತೆಗೆ ಪ್ರಯಾಣಿಸಿದ ಪ್ರಯಾಣಿಕನಿಗೆ ಕೋಳಿಗೂ ಅರ್ಧ ಟಿಕೆಟ್ ದರ ಪಾವತಿಸುವಂತೆ ಬಸ್ ನಿರ್ವಾಹಕ ಸೂಚಿಸಿದ ಹಿನ್ನೆಲೆಯಲ್ಲಿ ಪ್ರಯಾಣಿಕ ಹಾಗೂ ನಿರ್ವಾಹಕನ ನಡುವೆ ವಾಗ್ವಾದ ನಡೆದ ಘಟನೆ ಭಾನುವಾರ ಉಪ್ಪಿನಂಗಡಿಯಲ್ಲಿ ನಡೆದಿದೆ.
ಕುಪ್ಪೆಟ್ಟಿ ಪರಿಸರದ ವ್ಯಕ್ತಿಯೊಬ್ಬರು ಶಿರಾಡಿ ಗಡಿಯ ದೈವಸ್ಥಾನದಲ್ಲಿ ಹರಕೆ ಸಲ್ಲಿಸಲೆಂದು ಎರಡು ಕೋಳಿಗಳೊಂದಿಗೆ ಉಪ್ಪಿನಂಗಡಿ ಬಸ್ ನಿಲ್ದಾಣದಲ್ಲಿ ಸಕಲೇಶಪುರ ಕಡೆಗೆ ಹೋಗುವ ಬಸ್ ಏರಿದ್ದರು. ಸೀಮಿತ ನಿಲುಗಡೆ ಹೊಂದಿದ್ದ ಈ ಬಸ್ನಲ್ಲಿ ಸಕಲೇಶಪುರದ ಟಿಕೆಟ್ ದರ ರೂ. 77 ಪಾವತಿಸಬೇಕಾಗಿತ್ತು. ಆದರೆ, ಬಸ್ ನಿರ್ವಾಹಕ ವ್ಯಕ್ತಿಯ ಕೈಯಲ್ಲಿದ್ದ 2 ಜೀವಂತ ಕೋಳಿಗೂ ಟಿಕೆಟ್ ತೆಗೆದುಕೊಳ್ಳಬೇಕು ಎಂದು ಹೇಳಿ ರೂ. 154 ನೀಡುವಂತೆ ಸೂಚಿಸಿದರು.
ಆದರೆ ಇದರಿಂದ ಆಶ್ಚರ್ಯಗೊಂಡ ಪ್ರಯಾಣಿಕ ಟಿಕೆಟ್ ದರ ರೂ. 77 ಇದ್ದು,154 ರೂಪಾಯಿ ಯಾವ ಕಾರಣಕ್ಕೆ ಕೊಡಬೇಕು ಎಂದು ಪ್ರಶ್ನಿಸಿದಾಗ ನಿರ್ವಾಹಕ ‘ಜೀವಂತ ಕೋಳಿಗಳ ಪ್ರಯಾಣಕ್ಕೂ ಕೆಎಸ್ಆರ್ಟಿಸಿ ಬಸ್ಸಿನಲ್ಲಿ ಅರ್ಧ ಟಿಕೆಟ್ ನಿಯಮ ಅನ್ವಯವಾಗುತ್ತದೆ’ ಎಂದು ತಿಳಿಸಿದರು.
ಚೀಲದಲ್ಲಿ ಹಾಕಿ ಕೊಂಡೊಯ್ಯುವ ಕೋಳಿಗೂ ಟಿಕೆಟ್ ಯಾಕೆ ಮಾಡಿಸಬೇಕು ಎಂದು ಪ್ರಯಾಣಿಕ ಆಕ್ಷೇಪ ವ್ಯಕ್ತಪಡಿಸಿದರು. ಈ ಸಂದರ್ಭ ಇಬ್ಬರ ನಡುವೆ ಮಾತಿಗೆ ಮಾತು ಬೆಳೆಯಿತು. ಕೊನೆಗೆ ಜೀವಂತ ಪ್ರಾಣಿಗಳ ಸಂಚಾರಕ್ಕೆ ಅರ್ಧ ಟಿಕೆಟ್ ವಿಧಿಸುವುದು ಸರ್ಕಾರಿ ನಿಯಮ ಎಂದು ಖಡಕ್ ಆಗಿ ನುಡಿದಾಗ ಆಕ್ರೋಶಗೊಂಡ ಕೋಳಿಯೊಂದಿಗೆ ಪ್ರಯಾಣಿಸಿದ ಪ್ರಯಾಣಿಕ ‘ಇನ್ನು ಎಂದು ಸರ್ಕಾರಿ ಬಸ್ನಲ್ಲಿ ಕೋಳಿ ಜತೆಗೆ ಪ್ರಯಾಣಿಸಲ್ಲ’ ಶಪಥ ಬಸ್ಸಿನಿಂದ ಇಳಿದರು.