ಬಂಟ್ವಾಳ, ಮಾ 02(DaijiworldNews/AK): ಬಡವರಿಗೆ ಸರಕಾರ ನೀಡುವ ಪಡಿತರ ಅಕ್ಕಿಯನ್ನು ಗೋಡೌನ್ ನಿಂದ ಕಳವು ಮಾಡಲಾಗಿರುವ ಆರೋಪಕ್ಕೆ ಸಂಬಂಧಿಸಿದಂತೆ ಬಂಟ್ವಾಳ ನಗರ ಪೋಲೀಸ್ ಠಾಣಾ ಪೋಲೀಸ್ ಇನ್ಸ್ ಪೆಕ್ಟರ್ ಆನಂತಪದ್ಮನಾಭ ನೇತೃತ್ವದ ತಂಡ ಇಬ್ಬರು ಆರೋಪಿಗಳನ್ನು ಬಂಧಿಸಿ,ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು,ನ್ಯಾಯಾಲಯವು ಆರೋಪಿಗಳಿಗೆ 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ವಿಜಯ್ ಕೈಕುಂಜೆ ಮತ್ತು ರಝಾಕ್ ಕುಕ್ಕಾಜೆ ಅವರನ್ನು ಪೋಲೀಸರು ಬಂಧಿಸಲಾಗಿದ್ದು, ಮತ್ತಷ್ಟು ಮಾಹಿತಿ ಕಲೆಹಾಕುತ್ತಿದ್ದಾರೆ.ಕಳೆದ ಏಳು ತಿಂಗಳ ಹಿಂದೆ ಬಂಟ್ವಾಳದ ತಲಾಪಡಿ ಎಂಬಲ್ಲಿರುವ ಗೋಡೌನಲ್ಲಿ ಇರಿಸಲಾಗಿದ್ದ, ಕೋಟ್ಯಾಂತರ ರೂ ಮೌಲ್ಯದ ಪಡಿತರ ಅಕ್ಕಿಯನ್ನು ಕಳ್ಳತನ ಮಾಡಲಾಗಿದೆ ಎಂದು ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಆದರೆ ಈ ಬಗ್ಗೆ ಜಿಲ್ಲಾಧಿಕಾರಿ, ಪೋಲೀಸ್ ವರಿಷ್ಠಾಧಿಕಾರಿ ಮತ್ತು ರಾಜ್ಯ ಮಟ್ಟದ ಅನೇಕ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣದ ಕುರಿತು ತನಿಖೆ ನಡೆಸಿ ಸ್ಪಷ್ಟವಾದ ಮಾಹಿತಿ ನೀಡುವಂತೆ ಭರವಸೆ ನೀಡಿದ್ದರು.ಅದಾಗಿ ಕೆಲವು ತಿಂಗಳು ಕಳೆದರೂ ಪ್ರಕರಣದ ಬಗ್ಗೆ ಯಾವುದೇ ಸ್ಪಷ್ಟವಾದ ಮಾಹಿತಿ ಮತ್ತು ಕಾನೂನು ಪ್ರಕಾರ ಶಿಕ್ಷೆ ಆಗಿಲ್ಲ ಎಂದು ಜಿ.ಪಂ.ಮಾಜಿ ಸದಸ್ಯ ಎಂ.ತುಂಗಪ್ಪ ಬಂಗೇರ ತಹಶಿಲ್ದಾರ್ ಕಚೇರಿ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದರು.
ಜೊತೆಗೆ ಶೀಘ್ರವಾಗಿ ಪ್ರಮುಖ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮಕ್ಕೆ ಒತ್ತಾಯ ಮಾಡಿದ್ದರು.ಆದರೆ ತಿಂಗಳು ಕಳೆದರೂ ಆರೋಪಿಗಳ ಬಂಧನವಾಗಿಲ್ಲ, ಭರವಸೆ ನೀಡಿದ್ದ ತಾಲೂಕು ತಹಶಿಲ್ದಾರ್ ವರ್ಗಾವಣೆಯಾದ ಹಿನ್ನೆಲೆಯಲ್ಲಿ ಮತ್ತೆ ತುಂಗಪ್ಪ ಬಂಗೇರ ಅವರು ಪೋಲೀಸ್ ಠಾಣೆಯ ಮೆಟ್ಟಿಲು ಹತ್ತಿ ಜಿಲ್ಲಾ ಉಸ್ತುವಾರಿ ಸಚಿವರ ಕಾರ್ಯಕ್ರಮದಲ್ಲಿ ಕಪ್ಪು ಪತಾಕೆ ಹಿಡಿಯುತ್ತೇವೆ ಎಂದು ತಿಳಿಸಿದ್ದರು.
ಇದೀಗ ಬಂಟ್ವಾಳ ಪೋಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.ಪ್ರಕರಣದ ಬಗ್ಗೆ ಇನ್ನಷ್ಟು ಮಾಹಿತಿ ಕಲೆಹಾಕುತ್ತಿದ್ದು, ಇನ್ನಷ್ಟು ಆರೋಪಿಗಳು ಹಾಗೂ ವಿಚಾರಗಳು ಬೆಳಕಿಗೆ ಬರುವ ಸಾಧ್ಯತೆ ಗಳಿವೆ ಎಂದು ಹೇಳಲಾಗಿದೆ.
ಎಂ.ತುಂಗಪ್ಪ ಬಂಗೇರ ಆರೋಪಿಗಳನ್ನು ಬಂಧಿಸಿದ ಪೋಲೀಸರ ಕಾರ್ಯವನ್ನು ಜಿ.ಪಂ.ಮಾಜಿ ಸದಸ್ಯ ಎಂ.ತುಂಗಪ್ಪ ಬಂಗೇರ ಅಭಿನಂದಿಸಿದ್ದಾರೆ.
ಈ ಪ್ರಕರಣದ ಎಲ್ಲಾ ಆರೋಪಿಗಳನ್ನು ಪೋಲೀಸರು ಬಂಧಿಸುವ ಭರವಸೆ ಇದೆ.ಈಗಾಗಲೇ ಬಂಧಿಸಿದ ಆರೋಪಿ ಕಾಂಗ್ರೆಸ್ ನಾಯಕರೋರ್ವರ ಜೊತೆ ಗುರುತಿಸಿಕೊಂಡಿದ್ದಾನೆ ಎಂದು ಅವರು ಆರೋಪ ಮಾಡಿದ್ದಲ್ಲದೆ, ಘಟನೆಯ ತನಿಖೆ ಗೆ ಸರಕಾರ ಸಹಕಾರ ನೀಡದೆ ನೈಜ ಆರೋಪಿಗಳ ಬಂಧನಕ್ಕೆ ಮೀನಮೇಷ ಎಣಿಸುವ ಕಾರ್ಯಕ್ಕೆ ಗರಂ ಆದ ಬಂಗೇರ ಅವರು ಮತ್ತೆ ಪ್ರತಿಭಟನೆಯ ಎಚ್ಚರಿಕೆ ನೀಡಿದ್ದಾರೆ.