ಬಂಟ್ವಾಳ, ಮಾ 02(DaijiworldNews/AK):ಶಾಲಾ ಆವರಣದಲ್ಲಿ ಕಸವನ್ನು ಹೊತ್ತಿಸುವ ವೇಳೆ ಶಾಲಾ ಬಾಲಕನೋರ್ವನಿಗೆ ಬೆಂಕಿ ತಗುಲಿಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಮಾ.1 ರಂದು ಶುಕ್ರವಾರ ಸಂಜೆ ನಡೆದಿದೆ.
ಶಂಭೂರು ಗ್ರಾಮದಲ್ಲಿರುವ ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢ ಶಾಲೆಯ ಒಂಬತ್ತನೆಯ ತರಗತಿಯ ಅಪ್ರಾಪ್ತ ವಿದ್ಯಾರ್ಥಿಗೆ ಬೆಂಕಿ ತಗುಲಿಕೊಂಡಿದ್ದು,ವಿದ್ಯಾರ್ಥಿಯನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇದೀಗ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.ಶಾಲಾ ಆವರಣದಲ್ಲಿ ಕಸವನ್ನು ರಾಶಿ ಹಾಕಿ ಅದಕ್ಕೆ ಬೆಂಕಿ ಕೊಡಲಾಗಿತ್ತು.
ಕಸ ಉರಿಯುತ್ತಿರುವ ವೇಳೆ ಶಾಲೆಯಲ್ಲಿದ್ದ ಪೆಟ್ರೋಲಿಯಂ ಉತ್ಪನ್ನವೊಂದನ್ನು ಉರಿಯುತ್ತಿರುವ ಕಸದ ರಾಶಿಗೆ ಹಾಕುವಂತೆ ಶಿಕ್ಷಕಿ ವಿದ್ಯಾರ್ಥಿಗೆ ನೀಡಿದ್ದರಂತೆ.
ವಿದ್ಯಾರ್ಥಿ ಪೆಟ್ರೋಲಿಯಂ ಉತ್ಪನ್ನವನ್ನು ಕಸದ ರಾಶಿಗೆ ಹಾಕುವ ವೇಳೆ ಉರಿಯುತ್ತಿದ್ದ ಬೆಂಕಿ ವಿದ್ಯಾರ್ಥಿಯ ಮೈಮೇಲೆ ಹತ್ತಿಕೊಂಡಿದೆ. ವಿದ್ಯಾರ್ಥಿಯ ಕಾಲುಗಳಿಗೆ ಬೆಂಕಿ ಹತ್ತಿಕೊಂಡಿದ್ದು,ಸ್ಥಳದಲ್ಲಿ ಈತ ಹಾಕಿಕೊಂಡಿದ್ದ ಪ್ಯಾಂಟ್ ಬೆಂಕಿಗೆ ಭಸ್ಮವಾಗಿತ್ತು.
ಬೆಂಕಿಯ ತಾಗಿದ ಪರಿಣಾಮವಾಗಿ ಆತನಿಗೆ ಬರುತ್ತಿದ್ದ ಉರಿಯನ್ನು ತಡೆಯಲಾರದೆ ಬೊಬ್ಬೆ ಹಾಕಿಕೊಂಡು ಮನೆಗೆ ಓಡಿ ಹೋಗಿದ್ದ.ಬಳಿಕ ವಿದ್ಯಾರ್ಥಿಗೆ ನಡುಕ ಶುರುವಾಗಿದ್ದು ಈತನನ್ನು ಶಿಕ್ಷಕರು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.
ಕಾಲುಗಳಿಗೆ ಬೆಂಕಿ ತಗುಲಿ ತೀವ್ರವಾಗಿ ಕರಗಿದ ಕಾರಣ ಈತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲು ಸೂಚನೆ ನೀಡಿದ್ದಾರೆ ಮತ್ತು ಪೋಲೀಸ್ ಠಾಣೆಗೆ ದೂರು ನೀಡುವಂತೆ ತಿಳಿಸಿದ್ದಾರೆ.